ಬೆಂಗಳೂರು: ಬೆಂಗಳೂರಿನ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಕೊರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜಿಪುರ ಸಿಗ್ನಲ್ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗಿನ ಮೇಲುಸೇತುವೆಯ (ಎಲಿವೇಟೆಡ್ ಕಾರಿಡಾರ್) ಬಾಕಿಯಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
2.951 ಕಿ.ಮೀ ಉದ್ದದ ಮೇಲುಸೇತುವೆ ನಿರ್ಮಾಣಕ್ಕೆ 2017ರಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಶೇ.29 ರಷ್ಟು ಕೆಲಸ ಮುಗಿದಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಮೆಲುಸೇತುವೆ ನಿರ್ಮಾಣ ಮಾಡುತ್ತಿದ್ದ ಸಂಸ್ಥೆ ಕಾಮಾಗಾರಿ ನಿಲ್ಲಿಸಿದ್ದು, ಸಂಸ್ಥೆಗೆ ನೊಟೀಸ್ ನೀಡಿ ಟರ್ಮಿನೇಟ್ ಮಾಡಲಾಗಿದೆ. ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ನಾಲ್ಕು ಪಥದ ಮೇಲುಸೇತುವೆ ಕಾಮಗಾರಿಗೆ ಸುಮಾರು 300 ಕೋಟಿ ರೂ ವ್ಯಯವಾಗಲಿದೆ. ಮೇಲುಸೇತುವೆ ಕೇಂದ್ರೀಯ ಸದನ ಜಂಕ್ಷನ್ ಮತ್ತು ಸೋನಿ ವರ್ಲ್ಡ್ ಜಂಕ್ಷನ್‌ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ ಎಂದರು.
ಸೋನಿ ವರ್ಲ್ಡ್ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲುಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ. ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ. ಮೇಲುಸೇತುವೆ ಕಾಮಗಾರಿ ತ್ವರಿತವಾಗಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.
ಬನಶಂಕರಿ ಬಸ್ ನಿಲ್ದಾಣದ ಬಳಿ 6 ಕಡೆಯಿಂದ ವಾಹನಗಳ ಸಂಚಾರದಿಂದ ಹೆಚ್ಚು ಸಂಚಾರ ದಟ್ಟಣೆಯಾಗಲಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಬಸ್ ನಿಲ್ದಾಣದ ಜಂಕ್ಷನ್ ಸುತ್ತಲು ಪಾದಚಾರಿ ಮೇಲುಸೇತುವೆ ನಿರ್ಮಾಣ ಹಾಗೂ 2.5 ಕಿ.ಮೀ ಉದ್ದ ಮೇಲುಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆ ನಿವಾರಣೆ ಮಾಡಲು ಮತ್ತೊಮ್ಮೆ ಯೋಜನೆ ರೂಪಿಸಿ ಅಂತಿಮ ವಿನ್ಯಾಸ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೇಷಾದ್ರಿಪುರಂ ನಟರಾಜ ಚಿತ್ರಮಂದಿರದ ಬಳಿಯ ವೃತ್ತದಲ್ಲಿ ದಿ.ರಾಜೀವ್ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸುವ ಸಲುವಾಗಿ ಇಟ್ಟಮಡುವಿನಲ್ಲಿ ರೂಪುಗೊಳ್ಳುತ್ತಿರುವ ದಿ. ರಾಜೀವ್ ಗಾಂಧಿ ಅವರ ಪ್ರತಿಮೆ ವಿನ್ಯಾಸ ವೀಕ್ಷಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ: ಗಾಂಧಿ ಬಜಾರ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ವೀಕ್ಷಿಸಿದ ಬಳಿಕ ವ್ಯಾಪಾರಿಗಳು ಹಾಗೂ ಸ್ಥಳೀಯರ ಸಮಸ್ಯೆಗಳನ್ನು ಸಚಿವರು ಆಲಿಸಿದರು.
ವ್ಯಾಪಾರಿಗಳ ಕಣ್ಣೀರು: ಇದೇ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಗಾಂಧಿ ಬಜಾರ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಗಲೀಕರಣ ಮಾಡಿ ಕೊಡಿ ಎಂದು ಮನವಿ ಮಾಡಿದರು. ರಸ್ತೆ ಕಾಮಗಾರಿ ಇಲ್ಲದೇ ಸರಿಯಾದ ರೀತಿ ವ್ಯಾಪಾರ ಆಗುತ್ತಿಲ್ಲ. ವ್ಯಾಪಾರ ಇಲ್ಲದೇ ಜೀವನ ಸಾಗಿಸುವುದು ಹೇಗೆ?. ನಮ್ಮಜ್ಜಿ ನಮ್ಮ ತಾತನ ಕಾಲದಿಂದಲೂ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಸರ್ಕಾರ ಈ ಕೂಡಲೇ ಸಮಸ್ಯೆ ಬಗೆಹರಿಸುವಂತೆ ವ್ಯಾಪಾರಸ್ಥರು ಕಣ್ಣೀರು ಹಾಕಿದರು.
ಸಾಕಷ್ಟು ಮಂದಿ ಕಾಮಗಾರಿ ಅವೈಜ್ಞಾನಿಕವಾಗಿದೆ, ರಸ್ತೆ ಅಗಲ ಕಡಿಮೆ ಮಾಡಲಾಗಿದೆ. ಅದನ್ನು ಮೊದಲಿನಂತೆ ವಿಸ್ತರಿಸಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೊಡಲು ಮನವಿ ಮಾಡಿದರು. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರಸ್ತೆಯನ್ನು ಅಗಲ ಮಾಡುವ ಹಾಗೂ ಏನಾದರು ಬದಲಾವಣೆಗಳಿದ್ದರೆ ಅರ್ಜಿಗಳನ್ನು ಸಲ್ಲಿಸಿ, ಜೊತೆಗೆ ಸ್ಥಳೀಯ ಹಾಲಿ ಹಾಗೂ ಮಾಜಿ ಶಾಸಕರ ಜೊತೆ ಚರ್ಚಿಸಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಗೆ ಭರವಸೆ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸ್ಥಳೀಯ ಶಾಸಕ ಉದಯ್ ಬಿ ಗರುಡಾಚಾರ್, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಇದನ್ನೂಓದಿ: ಎರಡುವರೆ ವರ್ಷದಲ್ಲಿ ಇಡೀ ಟೀಂ ಬದಲಾಗಲಿದೆ, ಉಳಿದವರಿಗೆ ಸಚಿವ ಸ್ಥಾನದ ಭಾಗ್ಯ: ಶಾಸಕ ವಿನಯ ಕುಲಕರ್ಣಿ