ಬೆಂಗಳೂರು: ನಷ್ಟದ ಸುಳಿಗೆ ಸಿಲುಕಿ ಮುಚ್ಚುವ ಸ್ಥಿತಿ ತಲುಪಿರುವ ಏಷ್ಯಾದ ಮೊದಲ ಖಾಸಗಿ ಸಹಕಾರ ಸಾರಿಗೆ ಸಂಸ್ಥೆಗೆ ಆರ್ಥಿಕ ನೆರವು ನೀಡುವ ಬದಲಾಗಿ ಸಾಲ ಕೊಡಿಸುವ ಸರ್ಕಾರದ ನಿರ್ಧಾರಕ್ಕೆ ಸಂಘ ವಿರೋಧ ವ್ಯಕ್ತಪಡಿಸಿದ್ದು, ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ.
![dcm-laxman-savadi-meeting-about-sahakara-sarige-fund-in-bengalore](https://etvbharatimages.akamaized.net/etvbharat/prod-images/kn-bng-06-dcm-meeting-with-sahakari-sarige-ready-pkg-row-footage-9021933_19022020225804_1902f_1582133284_154.jpg)
ಮಲೆನಾಡು ಜನತೆಯ ಸಂಪರ್ಕ ಸೇತುವೆಯಾಗಿರುವ ಖಾಸಗಿ ವಲಯದ ಸಹಕಾರ ಸಾರಿಗೆ ಸಂಸ್ಥೆಗೆ ಆರ್ಥಿಕ ನೆರವು ನೀಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘದ ಪದಾಧಿಕಾರಿಗಳ ಜೊತೆ ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಸಭೆ ನಡೆಸಿದ್ರು.
ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಲಾಗಿದ್ದು, 6 ಕೋಟಿ 60 ಲಕ್ಷ ರೂ ಹಣವನ್ನು ಸರ್ಕಾರ ಭರಿಸಲು ಸಾಧ್ಯವಿಲ್ಲ. ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಕೊಡಿಸಿ ಅದರ ಬಡ್ಡಿಯನ್ನು ಸರ್ಕಾರ ಭರಿಸುವ ಹೊಸ ಪ್ರಸ್ತಾಪವನ್ನು ಡಿಸಿಎಂ ಸವದಿ ನೀಡಿದ್ರು.
ಆದರೆ ಡಿಸಿಎಂ ಪ್ರಸ್ತಾಪವನ್ನು ಸಾರಿಗೆ ಸಂಸ್ಥೆ ತಳ್ಳಿ ಹಾಕಿತು. ಯಾವ ಕಾರಣಕ್ಕೂ ಆರ್ಥಿಕ ನಷ್ಟವನ್ನು ನಿಭಾಯಿಸುವ ಶಕ್ತಿ ಸಾರಿಗೆ ಸಂಸ್ಥೆಗೆ ಇಲ್ಲ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಪಾಸ್ ನೀಡಿದ್ದು, ಅದರ ಹಣವನ್ನು ಸರ್ಕಾರ ಭರಿಸುವುದಾದರೆ ಸಾರಿಗೆ ಸಂಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದೇ ಇದ್ದಲ್ಲಿ 300 ಕುಟುಂಬ ಬೀದಿಗೆ ಬೀಳಲಿವೆ, ಈಗಾಗಲೇ 142 ಬಸ್ ಗಳಲ್ಲಿ 72 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಈಗಲೂ ನೆರವಿಗೆ ಬಾರದಿದ್ದಲ್ಲಿ ಸಂಸ್ಥೆ ಮುಚ್ಚಬೇಕಾಗಲಿದೆ ಹಾಗಾಗಿ ಆರ್ಥಿಕ ನೆರವು ನೀಡಲೇಬೇಕು. ಮಹಾರಾಷ್ಟ್ರ ವಿದರ್ಭ ಮಾದರಿಯಲ್ಲಿ ಸಾಕಷ್ಟು ಸಹಕಾರ ಸಂಸ್ಥೆಗಳನ್ನು ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಸಹಕಾರ ಸಾರಿಗೆಯನ್ನು ಉಳಿಸಿಕೊಳ್ಳಬೇಕು ಇನ್ನೆರಡು ದಿನದಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಸರ್ಕಾರ ಬಾರದಿದ್ದಲ್ಲಿ ಅನಿರ್ದಿಷ್ಟವಾದಿ ಮುಷ್ಕರದ ಎಚ್ಚರಿಕೆ ನೀಡಿದ್ರು.
ಇನ್ನು ಸದನದಲ್ಲಿ ವಿಷಯ ಪ್ರಸ್ತಾಪಿಸಲು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ನಿರ್ಧರಿಸಿದ್ದಾರೆ. ಸಹಕಾರ ಸಾರಿಗೆ ಸಂಸ್ಥೆಯ ಸಮಸ್ಯೆ ಮೇಲೆ ಸದನದಲ್ಲೇ ಬೆಳಕು ಚೆಲ್ಲಿ ಸಂಸ್ಥೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.