ಬೆಂಗಳೂರು: ರಾಜ್ಯ ಕೃಷಿ ಇಲಾಖೆ ಕೃಷಿ ಕಾಯಕ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕರಿಸಿದ್ದಾರೆ. ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಅಧಿಕಾರ ನೀಡಿದರು.
ನಾಡಗೀತೆ, ರೈತಗೀತೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಈ ಕಾರ್ಯಕ್ರಮ ಎರಡು ಕಾರಣಕ್ಕೆ ಖುಷಿ ತಂದಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇನ್ನೊಂದು ಹೃದಯ ಶ್ರೀಮಂತಿಕೆಯ ನಟ ದರ್ಶನ್ ಪಾಲ್ಗೊಂಡಿದ್ದಾರೆ ಎಂದರು.
ರೈತರು, ಬಡವರು, ಶ್ರಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ರೈತರೊಂದಿಗೆ ಒಂದು ದಿನ ನನ್ನ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ದರ್ಶನ್ ಪ್ರೋತ್ಸಾಹ ನೀಡಿ ಆಗಮಿಸಿದರು. ಕೋಟಿ ಕೋಟಿ ಹಣ ನೀಡಿ ಬಹುರಾಷ್ಟ್ರೀಯ ಕಂಪನಿಗೆ, ಉತ್ಪನ್ನಕ್ಕೆ ರಾಯಭಾರಿ ಆಗುತ್ತಾರೆ. ಆದರೆ ದರ್ಶನ್ ನಮ್ಮ ಇಲಾಖೆಗೆ ಉಚಿತವಾಗಿ ರಾಯಭಾರಿ ಆಗಲು ಒಪ್ಪಿದ್ದಾರೆ ಎಂದು ಕೊಂಡಾಡಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೃಷಿ ಇಲಾಖೆ ರಾಯಭಾರಿಯಾಗಲು ಒಪ್ಪಿದ್ದಕ್ಕೆ ನಾಡಿನ ಸಮಸ್ತ ಜನತೆ ಪರವಾಗಿ ಅಭಿನಂದಿಸುತ್ತೇನೆ. ದರ್ಶನ್ ಜನಪ್ರಿಯತೆ ದೊಡ್ಡ ಮಟ್ಟದ್ದಿದೆ. ಕಾರ್ಯಕ್ರಮ ವಿಧಾನಸೌಧದ ಹೊರಭಾಗ ಮಾಡಿದ್ದರೆ 50 ಸಾವಿರ ಮಂದಿ ಸೇರುತ್ತಿದ್ದರು ಎಂದರು.
ಬಳಿಕ ದರ್ಶನ್ ಮಾತನಾಡಿ, ಬಿ.ಸಿ ಪಾಟೀಲ್ ಅವರು ಮೊದಲು ಪೊಲೀಸ್, ಬಳಿಕ ಸಿನಿಮಾ ಮಾಡಿದರೂ ಈಗ ರಾಜಕಾರಣದಲ್ಲಿದ್ದಾರೆ. ಅವರು ಇದೆಲ್ಲಾ ಮಾಡ್ತಾ ಇರೋದು ಜನರಿಗಾಗಿ. ನಾನು ಹೆಚ್ಚೇನೂ ಮಾಡುತ್ತಿಲ್ಲ. ರೈತರ ಸವಲತ್ತುಗಳನ್ನು ಜನರಿಗೆ ಜಾಹೀರಾತು ಮೂಲಕ ತಿಳಿಸುತ್ತಿದ್ದೇನೆ ಅಷ್ಟೇ. ನಮ್ಮದು ಮತ್ತು ರೈತರದ್ದು ಬ್ಲಡ್ ರಿಲೇಷನ್ ಇದೆ ಎಂದರು.
ಇದನ್ನೂ ಓದಿ: ವಿಶೇಷ ಚೇತನ ಮಕ್ಕಳೊಂದಿಗೆ ನಟ ದರ್ಶನ್: ವಿಡಿಯೋ ನೋಡಿ