ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ. ಗುರುವಾರ ತಡರಾತ್ರಿವರೆಗೂ ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಎಐಸಿಸಿ ವೀಕ್ಷಕರಾದ ಮಧುಸೂಧನ್ ಮಿಸ್ತ್ರಿ ಮತ್ತು ಭಕ್ತಚರಣ ದಾಸ್ ಸಭೆ ನಡೆಸಿದ ಬಳಿಕ ಹಲವು ಮುಖಂಡರ ಅಭಿಪ್ರಾಯದ ಪ್ರಕಾರ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾಹಿತಿಯಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ಅಂಗೀಕರಿಸುವುದೋ? ಬೇಡವೋ? ಎಂಬ ಕುರಿತು ರಾಜ್ಯದ 50 ನಾಯಕರಿಂದ ಸಂಗ್ರಹಿಸಿದ ಮಾಹಿತಿಯನ್ನು ವರದಿ ರೂಪದಲ್ಲಿ ಎಐಸಿಸಿ ವೀಕ್ಷಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒಂದೆರಡು ದಿನಗಳಲ್ಲಿ ಸಲ್ಲಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿರುವ ಹಿನ್ನೆಲೆ ಅದನ್ನು ಸ್ವೀಕರಿಸಿದರೆ ರಾಜ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜೊತೆಗೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೂ ನೇಮಕ ಆಗಬೇಕಿದೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸುವುದಕ್ಕೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದು, ದಿನೇಶ್ ಗುಂಡೂರಾವ್ ವಿಚಾರದಲ್ಲಿ ಅಂತಹ ಸಹಮತವನ್ನು ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆ ಎಐಸಿಸಿ ವೀಕ್ಷಕರು ನೀಡುವ ವರದಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನಿರಾಕರಿಸುವ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕರಿಸುವ ಶಿಫಾರಸು ಇರಲಿದೆ ಎನ್ನಲಾಗುತ್ತಿದೆ.
ಯಾರ್ಯಾರ ಹೆಸರು ಪ್ರಸ್ತಾಪ: ಕೆಪಿಸಿಸಿ ಅಧ್ಯಕ್ಷ ಗಾದಿಯ ರೇಸ್ನಲ್ಲಿ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್, ಕೆ.ಹೆಚ್.ಮುನಿಯಪ್ಪ, ಡಾ. ಜಿ.ಪರಮೇಶ್ವರ್ ಹೆಸರುಗಳು ಚೆರ್ಚೆಗೆ ಬಂದಿವೆ. ಮುನಿಯಪ್ಪ ಪರ ಕೇವಲ ನಾಲ್ಕೈದು ನಾಯಕರು ಮಾತನಾಡಿದ್ದಾರೆ. ವಿಶೇಷ ಎಂದರೆ ಬೆಂಗಳೂರು ನಗರದ ಪ್ರಮುಖ ನಾಯಕರಾಗಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪರ 15ಕ್ಕೂ ಹೆಚ್ಚು ಜನ ಒಲವು ವ್ಯಕ್ತಪಡಿಸಿದ್ದಾರೆ. ಉಳಿದವರ ಹೆಸರು ಹಾಗೆಯೇ ಬಂದು ಹೀಗೆ ಹೋಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಪ್ರಬಲ ನಾಯಕ ಹಾಗೂ ಒಕ್ಕಲಿಗ ಸಮುದಾಯದ ಮುಖಂಡ ಡಿ.ಕೆ.ಶಿವಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬಂದಿದೆ.
ಪ್ರಬಲ ಸಮುದಾಯಕ್ಕೆ ಆದ್ಯತೆ: ಈಗಾಗಲೇ ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಪ್ರಬಲ ಮತಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯ ಬಿಜೆಪಿ ಕೈ ಹಿಡಿದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇನ್ನೊಂದು ಪ್ರಬಲ ಸಮುದಾಯವಾದ ಒಕ್ಕಲಿಗರು ಕೂಡ ಬಿಜೆಪಿ ಪರ ನಿಂತಿದ್ದಾರೆ. ಈ ಹಿನ್ನೆಲೆ ತಮ್ಮ ಮತ ಬ್ಯಾಂಕ್ಗಳನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಮರಳಿ ಇವರ ವಿಶ್ವಾಸ ಗಳಿಸಲು ಆಯಾ ಸಮುದಾಯಕ್ಕೆ ವಿಶೇಷ ಪ್ರಧಾನ್ಯ ನೀಡಲು ಮುಂದಾಗಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ನ ಪ್ರಮುಖ ಹುದ್ದೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಪ್ರಬಲ ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ಗೆ ನೀಡಲು ಮುಂದಾಗಿದೆ. ನಾಯಕತ್ವ ಗುಣ ಹಾಗೂ ಪ್ರಬಲ ಸಮುದಾಯದ ಹಿನ್ನೆಲೆ ಹೊಂದಿರುವ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸೂಕ್ತ ಆಯ್ಕೆ ಎಂದು ಬಿಂಬಿತವಾಗಿದ್ದಾರೆ. ಇದರಿಂದಲೇ ಇವರ ಪರ ಹೆಚ್ಚಿನ ಕಾಂಗ್ರೆಸ್ ಮುಖಂಡರ ಒಲವು ಕೂಡ ವ್ಯಕ್ತವಾಗಿದೆ ಎನ್ನಲಾಗಿದೆ.
ಒಗ್ಗೂಡಿಸಿ ಕೊಂಡೊಯ್ಯುವ ಶಕ್ತಿ: ಮೂಲ ಕಾಂಗ್ರೆಸ್ ಹಾಗೂ ವಲಸಿಗ ಕಾಂಗ್ರೆಸ್, ಹಿರಿಯರು, ಕಿರಿಯರನ್ನು ಒಟ್ಟಾಗಿ ಕರೆದೊಯ್ಯುವ ಶಕ್ತಿ ಇದೆ ಎಂಬ ಅಭಿಪ್ರಾಯ ಡಿಕೆಶಿ ಪರ ವ್ಯಕ್ತವಾಗಿರುವುದು ಕೂಡ ಆಯ್ಕೆಗೆ ಪ್ರಮುಖವಾಗಿ ಪರಿಗಣಿಸಲಾಗಿದೆ. ಇನ್ನೊಂದೆಡೆ ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯರನ್ನು ಮುಂದುವರೆಸಲು ಬಹುತೇಕ ನಾಯಕರ ಒಲವು ವ್ಯಕ್ತವಾಗಿದೆ. ಇಬ್ಬರೂ ನಾಯಕರು ಒಟ್ಟಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸಿದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷ ಮತ್ತೆ ಪ್ರಾಬಲ್ಯ ಸ್ಥಾಪಿಸುವಲ್ಲಿ ಅನುಮಾನವಿಲ್ಲ ಎಂಬ ಅಭಿಪ್ರಾಯವನ್ನು ಹೊಂದಲಾಗಿದೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದ ಎಐಸಿಸಿ ವೀಕ್ಷಕರು, ನಿಮ್ಮ ರಾಜೀನಾಮೆ ಅಂಗೀಕರಿಸುವುದಿಲ್ಲ. ನೀವೇ ಎರಡು ಹುದ್ದೆಗಳಲ್ಲಿ ಮುಂದುವರೆಯಿರಿ ಎಂದು ಮನವೊಲಿಸಿದ್ದಾರೆ. ವೀಕ್ಷಕರ ಸಭೆಗೆ ಮುನ್ನ ಒಮ್ಮೆ ಭೇಟಿ ಮಾಡಿದ್ದ ನಾಯಕರ ಸಭೆಯ ಬಳಿಕ ರಾಜ್ಯ ನಾಯಕರ ಮಾಹಿತಿ ಸಂಗ್ರಹಿಸಿ ಮಧ್ಯರಾತ್ರಿ ಸಿದ್ದರಾಮಯ್ಯರನ್ನು ಮತ್ತೆ ಭೇಟಿ ಮಾಡಿ ಚೆರ್ಚೆ ನಡೆಸಿ ಮನವೊಲಿಸಿದ್ದಾರೆ ಎಂಬ ಮಾಹಿತಿ ಇದೆ. ಸೋನಿಯಾ ಗಾಂಧಿ ಅವರಿಂದಲೇ ತಮಗೆ ಆಹ್ವಾನ ಬರಲಿದ್ದು, ತಮ್ಮನ್ನೇ ಮುಂದುವರೆಸುವಂತೆ ಸೂಚನೆ ನೀಡಲಾಗುತ್ತದೆ ಎಂದು ವೀಕ್ಷಕರು ತಿಳಿಸಿದ್ದು, ವೀಕ್ಷಕರ ಈ ಮನವಿಯನ್ನು ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪರ್ಯಾಯ ವ್ಯವಸ್ಥೆ: ಎಐಸಿಸಿ ಕಾರ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಾ. ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ನೀಡಲು ಹೈಕಮಾಂಡ್ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಸೂಕ್ತ, ಅಂತೆಯೇ ಯುವಕರನ್ನು ಸೆಳೆಯುವ ಹಾಗೂ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಇರುವ ಡಿ.ಕೆ.ಶಿವಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿದರೆ ಬಿಜೆಪಿಗೆ ತಕ್ಕ ತಿರುಗೇಟು ನೀಡಬಹುದು ಎಂಬ ಅಭಿಪ್ರಾಯ ಅಂದಿನ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರ ಕೊರತೆ ಇದ್ದು, ಈ ಹಿನ್ನೆಲೆ ಇರುವ ನಾಯಕರಲ್ಲೇ ಯಾರನ್ನಾದರೂ ಆಯ್ಕೆ ಮಾಡುವ ಅನಿವಾರ್ಯ ಕಾಂಗ್ರೆಸ್ ಹೈಕಮಾಂಡ್ಗೆ ಎದುರಾಗಿದೆ. ಈ ಹಿನ್ನೆಲೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಿದ್ದರಾಮಯ್ಯ ಹಾಗೂ ಇಡಿ ತನಿಖೆ ಎದುರಿಸುತ್ತಿದ್ದರೂ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ನಿಲುವಿಗೆ ಕಾಂಗ್ರೆಸ್ ಬಂದಿದೆ ಎನ್ನಲಾಗುತ್ತಿದೆ.