ಬೆಂಗಳೂರು: ಸಿದ್ದಾಂತಕ್ಕಾಗಿ ಪಕ್ಷದಲ್ಲಿ ಇರುವವರಿಗೆ ಎರಡನೇ ಆಯ್ಕೆ ಇರಲ್ಲ ಆದರೆ ವೈಯಕ್ತಿಕ ನೆಲೆಯಲ್ಲಿ ಆಲೋಚನೆ ಮಾಡುವವರು ಪಕ್ಷ ತೊರೆಯುವ ಆಲೋಚನೆ ಮಾಡಲಿದ್ದಾರೆ ಎಂದು ಪಕ್ಷ ತೊರೆಯುತ್ತಿರುವ ಮಾಜಿ ಶಾಸಕ ರಾಜು ಕಾಗೆಗೆ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಸಚಿವ ಸಿ.ಟಿ ರವಿ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಮ್ಮದು ಐಡಿಯಾಲಜಿ ರಿಲೇಟೆಡ್ ರಾಜಕೀಯ ಪಕ್ಷ. ಹೊರಗೆ ಹೋದವರು ಕೆಡಲಿದ್ದಾರೆ ಆದರೆ ಪಕ್ಷ ಕೆಡಲ್ಲ. ಹಿಂದೆ ಇದೆಲ್ಲಾ ಆಗಿ ಹೋಗಿದೆ. ಈ ಅನುಭವದ ನಂತರವೂ ಪಕ್ಷದಿಂದ ಹೊರ ಹೋದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ನಮ್ಮ ಪಕ್ಷ ಕೂಡುವ ರಾಜಕಾರಣದಲ್ಲಿ ನಂಬಿಕೆ ಹೊಂದಿದೆ, ದೂಡುವ ರಾಜಕಾರಣದಲ್ಲಿ ಅಲ್ಲ . ಕೆಟ್ಟ ಅನುಭವ ಆಗಿ ಬಹಳ ಜನ ವಾಪಸ್ ಬಂದಿದ್ದಾರೆ. ವಿಜಯ ಶಂಕರ್ ಉದಾಹರಣೆ ಕಣ್ಣ ಮುಂದಿದೆ. ಸಿದ್ದಾಂತಕ್ಕೆ ಪಕ್ಷದಲ್ಲಿ ಇದ್ದವರಿಗೆ ಎರಡನೇ ಆಯ್ಕೆ ಇಲ್ಲ. ಕೆಲವರು ಬೇರೆ ಬೇರೆ ರೀತಿ ವೈಯಕ್ತಿಕ ನೆಲೆ ಯೋಚಿಸುವವರಿಗೆ ಆಯ್ಕೆ ಇರಲಿದೆ ಎಂದು ರಾಜು ಕಾಗೆ ನಿರ್ಧಾರವನ್ನು ಟೀಕಿಸಿದರು.
ಶರತ್ ಬಚ್ಚೇಗೌಡ ವಿಚಾರವಾಗಿ ಮಾತನಾಡಿ, ಅವರ ಕುಟುಂಬಕ್ಕೆ ಪಕ್ಷ ಹಲವು ಅವಕಾಶ ಮಾಡಿಕೊಟ್ಟಿದೆ. 2008 ರಲ್ಲಿ ಬಚ್ಚೇಗೌಡರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಮಂತ್ರಿ ಮಾಡಲಾಯಿತು. ನಂತರ ಸೋತರೂ ಎರಡು ಬಾರಿ ಎಂಪಿ ಟಿಕೆಟ್ ನೀಡಲಾಗಿದೆ. ನಿಮ್ಮ ಕುಟುಂಬಕ್ಕೆ ಪಕ್ಷ ಏನು ಕಡಿಮೆ ಮಾಡಿದೆ. ಮುಂದಿನ ರಾಜಕೀಯ ಜೀವನದ ಬಗ್ಗೆ ಆಲೋಚನೆ ಮಾಡಿ. ಶರತ್ ನನ್ನ ಕಿರಿಯ ಸ್ನೇಹಿತ ಎಂದು ಸಲಹೆ ನೀಡುತ್ತಿರುವೆ ಎಂದು ಶರತ್ ಬಂಡಾಯಕ್ಕೆ ಸಿ.ಟಿ ರವಿ ಬೇಸರ ವ್ಯಕ್ತಪಡಿಸಿದರು.
ಪೂರ್ಣ ಬಹುಮತದಿಂದಿಗೆ ನಾವು ಅಧಿಕಾರಕ್ಕೆ ಬಂದಿಲ್ಲ:
ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ನಮಗೆ ಅಧಿಕಾರ ಸಿಕ್ಕಿದೆ. ಉಪ ಚುನಾವಣೆ ನಂತರ ಏನಾಗಲಿದೆ ನೋಡಬೇಕು. ಎಸಿಬಿ ರದ್ದು ವಿಚಾರ ಸೇರಿ ನಮ್ಮ ಪ್ರಣಾಳಿಕೆಗೆ ನಾವು ಬದ್ದವಾಗಿರಬೇಕು ಮುಂದೆ ಎಲ್ಲದರ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.