ಬೆಂಗಳೂರು : ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರ ಮನವಿಯ ಮೇರೆಗೆ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ನೆಟೆರೋಗ ಸಂತ್ರಸ್ತರಿಗೆ ಪಾವತಿಸಲು ಬಾಕಿ ಇದ್ದ ರೂ. 74.67 ಕೋಟಿ ರೂ. ಹಣ ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾದ ಬೆಳೆಯ ಪರಿಹಾರ ಪಾವತಿಗೆ ರೂ. 233 ಕೋಟಿ ಅನುದಾನ ಮೀಸಲಿರಿಸಿ ಆದೇಶ ಹೊರಡಿಸಿತ್ತು.
ಈಗಾಗಲೇ ಎರಡು ಕಂತುಗಳಲ್ಲಿ ಒಟ್ಟು ರೂ. 148.33 ಕೋಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಸಲುವಾಗಿ ಬಾಕಿ ಹಣವನ್ನೂ ಬಿಡುಗಡೆ ಮಾಡುವಂತೆ ಕೃಷಿ ಸಚಿವರು ಕೋರಿದ ಹಿನ್ನಲೆಯಲ್ಲಿ ಅಂತಿಮ ಕಂತಿನ ಅನುದಾನ ರೂ.74.67 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ನಾಲ್ಕು ಜಿಲ್ಲೆಗಳ ಅರ್ಹ ರೈತರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಕೃಷಿ ಸಬಲೀಕರಣಕ್ಕೆ ನೆರವಾಗಿ : ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ, ರೈತರನ್ನು ಸಬಲೀಕರಣಗೊಳಿಸಲು ಎಲ್ಲಾ ತಾಂತ್ರಿಕ, ವೈಜ್ಞಾನಿಕ ನೆರವನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೂಚನೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕೃಷಿ, ಜಲಾನಯನ ಇಲಾಖೆಗಳು, ವಿಶ್ವವಿದ್ಯಾನಿಲಯಗಳ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರೈತರಿಗೆ ವಿವಿಧ ಯೋಜನೆಗಳ ನೆರವಿನ ಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟರು.
ವಿಶ್ವ ವಿದ್ಯಾನಿಲಯಗಳು ರೈತರಿಗೆ ಆಪ್ತವಾಗಬೇಕು. ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವುದರ ಜೊತೆಯಲ್ಲಿ ಯಶಸ್ವಿ ಸಂಶೋಧನೆಗಳ ಫಲವನ್ನು ಸಕಾಲದಲ್ಲಿ ರೈತರಿಗೆ ತಲುಪಿಸಬೇಕು ಎಂದರು. ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ಒದಗಿಸಬೇಕು. ಇದಕ್ಕೆ ಇಲಾಖಾ ಅಧಿಕಾರಿಗಳು ವಿಮಾ ಕಂಪನಿಗಳ ಜೊತೆ ಸಮನ್ವಯ ಮಾಡಿ ಕೃಷಿಕರಿಗೆ ನೆರವಾಗಿ ಎಂದರು.
ಬೆಳೆ ಸಮೀಕ್ಷೆ ಶೇ. 100 ರಷ್ಟು ಪೂರ್ಣ ಆಗಬೇಕು. ಬೆಳೆ ಹಾನಿ ವರದಿ ವೇಳೆ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಕೃಷಿ ವಿಚಕ್ಷಣಾ ದಳ ಚುರುಕಾಗಿ ಕೆಲಸ ಮಾಡಬೇಕು. ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾವಹಿಸಿ, ನಕಲಿ ರಸಗೊಬ್ಬರ ಬಿತ್ತನೆ ಬೀಜ ಮಾರಾಟ, ಸಾಗಾಟದ ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ಸೂಚನೆ ನೀಡಿದರು.
ರೈತರ ಅನುಕೂಲದ ದೃಷ್ಠಿಯಿಂದ ಕೃಷಿ ಯಾಂತ್ರೀಕರಣ, ಕೃಷಿ ಭಾಗ್ಯ ಯೋಜನೆ ಚುರುಕು ಮಾಡಿ, ಕೃಷಿ ಹಾಗೂ ಕಂದಾಯ ಇಲಾಖೆ ಅನುದಾನದಲ್ಲಿ ಈ ಸಾಲಿನಲ್ಲಿ ಒಟ್ಟು 32000 ಕೃಷಿ ಹೊಂಡ ನಿರ್ಮಾಣ ಪೂರ್ಣಗೊಳಿಸಿ ಎಂದು ಚಲುವರಾಯಸ್ವಾಮಿ ನಿರ್ದೇಶನ ನೀಡಿದರು.
ನೆಟೆ ರೋಗ ಬಾಕಿ ಪರಿಹಾರ ಆದಷ್ಟು ಬೇಗ ರೈತರ ಖಾತೆಗೆ ವರ್ಗಾವಣೆ ಮಾಡಿ. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಜಿಲ್ಲೆಗಳ ಬಗ್ಗೆ ನೋಡಲ್ ಅಧಿಕಾರಿಗಳೂ ಸರಿಯಾಗಿ ಮೇಲುಸ್ತುವಾರಿ ಮಾಡಿ ನಿಗಧಿತ ಕಾಲಮಿತಿಯೊಳಗೆ ಶೇ 100 % ಗುರಿ ಸಾಧನೆ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರ್ಐಡಿಎಫ್ ಯೊಜನೆಯಡಿ ಅನುಮೋದನೆಗೊಂಡ ಕಾಮಗಾರಿಗಳು ವಿಳಂಭವಾಗಿದ್ದು, ಈಗಾಗಲೇ ಮುಕ್ತಾಯ ಹಂತದಲ್ಲಿ ಇರುವ ಕಟ್ಟಡಗಳನ್ನು ಪೂರ್ಣಗೊಳಿಸಿ ಸೇವೆಗೆ ಬಳಸಿಕೊಳ್ಳಿ ಎಂದು ಚಲುವರಾಯಸ್ವಾಮಿ ಹೇಳಿದರು.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಅನ್ಬುಕುಮಾರ್ ಅವರು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.
ಕೃಷಿ ಆಯುಕ್ತರಾದ ವೈ. ಎಸ್ ಪಾಟೀಲ್, ಜಲಾನಯನ ಇಲಾಖೆ ಆಯುಕ್ತರಾದ ಡಾ. ಗಿರೀಶ್, ಆಯುಕ್ತರಾದ ಶ್ರೀನಿವಾಸ್, ಕೃಷಿ ನಿರ್ದೇಶಕರಾದ ಡಾ ಪುತ್ರ, ಬೆಂಗಳೂರು ಕೃಷಿ ವಿವಿ ಕುಲಪತಿ ಸುರೇಶ್, ಕೃಷಿ ಸಚಿವ ಆಪ್ತ ಕಾರ್ಯದರ್ಶಿ ಪ್ರಭಾಕರ್ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ: ಬರ ಪರಿಹಾರ: 324 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ