ಬೆಂಗಳೂರು: ತಾಯಿಯೇ ದೇವರು, ಮಕ್ಕಳಿಗೆ ತಾಯಿನೇ ಎಲ್ಲ. ಆ ತಾಯಿ ಪ್ರೀತಿಗಾಗಿ ಎಷ್ಟೋ ಜನ ಪರಿತಪಿಸುತ್ತಾರೆ. ಆದರೆ, ಇಲ್ಲೊಬ್ಬಳು ಮಾತ್ರ ತನ್ನ ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ನಲ್ಲಿ ಶವ ತುಂಬಿಕೊಂಡು ನಿನ್ನೆ(ಸೋಮವಾರ) ರಾತ್ರಿ 11:30 ರ ಸುಮಾರಿಗೆ ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ. ಸೆನಾಲಿ ಸೇನ್ (39) ತನ್ನ 71 ವರ್ಷ ವಯಸ್ಸಿನ ತಾಯಿ ಬೀವಾ ಪಾಲ್ನ ಕೊಲೆ ಮಾಡಿದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಮೂಲತಃ ಕೊಲ್ಕತ್ತಾದವರಾದ ಸೆನಾಲಿ, ಮಾಸ್ಟರ್ ಆಫ್ ಫಿಸಿಯೋ ಥೆರಪಿ ಓದಿಕೊಂಡಿದ್ದರು. ಮದುವೆಯಾಗಿ ಓರ್ವ ಮಗ ಸಹ ಇದ್ದಾನೆ. ಸುಮಾರು ಆರು ವರ್ಷದಿಂದ ಮೈಕೋ ಲೇಔಟ್ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟಿನಲ್ಲಿ ಸೆನಾಲಿ ವಾಸವಿದ್ದಳು. ತಂದೆಯ ಮರಣದ ನಂತರ ತಾಯಿಯ ಜವಾಬ್ದಾರಿಯೂ ಸೆನಾಲಿಯ ಮೇಲಿತ್ತು.
ಆದರೆ, ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಹಾಗೂ ಅತ್ತೆ ನಿತ್ಯ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಸೆನಾಲಿ ಸ್ವತಃ ತಾನೇ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ನಿನ್ನೆ(ಸೋಮವಾರ) ರಾತ್ರಿ 11 ಗಂಟೆ ಸುಮಾರಿಗೆ ತಾಯಿ ಹೊಟ್ಟೆ ನೋವು ಅಂದಾಗ, ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದಾಳೆ.
ಬಳಿಕ ಸೂಟ್ ಕೇಸ್ನಲ್ಲಿ ತಾಯಿಯ ಶವ ಇರಿಸಿ, ಅದರ ಜೊತೆಗೆ ತಂದೆಯ ಫೋಟೋ ಇರಿಸಿದ್ದಾಳೆ. ಬಳಿಕ ಕ್ಯಾಬ್ ಬುಕ್ ಮಾಡಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಆರೋಪಿಯ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ಆರೋಪಿ ಸೆನಾಲಿ ಸೇನ್ (39) ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಆರೋಪಿ ಮಹಿಳೆ, ಆಕೆಯ ಗಂಡ, ಮಗ, ಅತ್ತೆ ಹಾಗೂ ಆಕೆಯ ತಾಯಿ ಬಿಳೇಕಹಳ್ಳಿಯ ಅಪಾರ್ಟ್‌ಮೆಂಟಿನಲ್ಲಿ ಐದು ವರ್ಷಗಳಿಂದ ವಾಸವಿದ್ದರು. ಅವರ ಕುಟುಂಬದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು ಎಂದು ಅನಿಸುತ್ತದೆ.
ನಿನ್ನೆ ಬೆಳಗ್ಗೆ ಆಕೆಯ ಗಂಡ ಕೆಲಸಕ್ಕೆ ಹೋದಾಗ ಸುಮಾರು 11 ಗಂಟೆ ಸುಮಾರಿಗೆ ಆರೋಪಿ ಮಹಿಳೆ ಅವರ 71 ವರ್ಷದ ತಾಯಿಗೆ ದುಪ್ಪಟ್ಟಾದಿಂದ ಕತ್ತು ಬಿಗಿದು ಹತ್ಯೆಗೈದಿದ್ದಾಳೆ. ನಂತರ ಕೃತ್ಯ ತನ್ನ ಕುಟುಂಬದ ಮೇಲೆ ಬರದಿರಲಿ ಎಂದು ಮೃತದೇಹವನ್ನ ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಮೈಕೋಲೇಟ್ ಠಾಣೆಗೆ ಬಂದಿದ್ದಾಳೆ. ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ನಂತರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: Living Together: ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್: ಕೆಲ ತಿಂಗಳಲ್ಲಿ ನಡೆದ ಸಂಗಾತಿಗಳ ಕೊಲೆಗಳು ಎಷ್ಟು?