ಬೆಂಗಳೂರು: ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಹಾಗೂ ಕಾರ್ಯಕರ್ತರು, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭೇಟಿ ಕೊಟ್ಟು ದಾಖಲೆಗಳ ಸಮೇತ ದೂರು ನೀಡಿದ್ದಾರೆ.
ಈ ಹಿಂದೆ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ, ಆರ್ಟಿಒ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ಸಲ್ಲಿಸಲಾಗಿದೆ.
ದೂರಿನಲ್ಲಿ ಏನಿದೆ:
ಆರ್ಟಿಒ ಇನ್ಸ್ಪೆಕ್ಟರ್ಗಳ ನೇಮಕಾತಿಯಲ್ಲಿ ವರ್ಕ್ ಶಾಪ್ ಸೇವಾನುಭವ ಪ್ರಮಾಣ ಪತ್ರವನ್ನು ತಪ್ಪಾಗಿ ಸೃಷ್ಟಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವ ಡಿ.ಸಿ.ತಮ್ಮಣ್ಣನವರ ಸಂಬಧಿಗಳಿಗೆ, ಹಾಗೇ ಸಾರಿಗೆ ಇಲಾಖೆಯ 50ಕ್ಕೂ ಹೆಚ್ಚು ಆರ್ಟಿಒ ಅಧಿಕಾರಿಗಳ ಮಕ್ಕಳಿಗೆ ಹುದ್ದೆ ನೀಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿ ಐಜಿಪಿಗೆ ದೂರು ನೀಡಿದ್ದಾರೆ.
ಇನ್ನು ನಾಗೇಶ್ ಮಾತನಾಡಿ, ಈಗಾಗ್ಲೇ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಹೀಗಾಗಿ ಪ್ರಕರಣವನ್ನ ಯಡಿಯೂರಪ್ಪ ಅವರಿಗೆ ತಿಳಿಸಿ, ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದರು.