ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಮಯದಲ್ಲಿ ಎಲ್ಲ ಕ್ಷೇತ್ರವೂ ನೆಲಕಚ್ಚಿವೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ. ಹೀಗಾಗಿ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಮಾಜಿ ಶಿಕ್ಷಣ ಸಚಿವರುಗಳೊಂದಿಗೆ ಸಚಿವ ಸುರೇಶ್ ಕುಮಾರ್ ವಿಡಿಯೋ ಸಂವಾದ ನಡೆಸಿದರು.
ಹಿಂದಿನ ಶಿಕ್ಷಣ ಸಚಿವರಾದ ಹೆಚ್. ವಿಶ್ವನಾಥ್, ಪ್ರೊ. ಬಿ.ಕೆ. ಚಂದ್ರಶೇಖರ್, ಬಸವರಾಜ ಹೊರಟ್ಟಿ, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಿಮ್ಮನೆ ರತ್ನಾಕರ್, ತನ್ವೀರ್ ಸೇಠ್ ಹಾಗೂ ಮಹೇಶ್ ಅವರು ಪಾಲ್ಗೊಂಡಿದ್ದರು. ಈ ವೇಳೆ ತಂತ್ರಜ್ಞಾನವು ತರಗತಿ ಕಲಿಕೆಗೆ ಪರ್ಯಾಯವಲ್ಲವೆಂಬ ಅಂಶವನ್ನು ಎಲ್ಲರೂ ಪ್ರತಿಪಾದಿಸಿದರು. ಆದರೆ ಇಂತಹ ಅನಿವಾರ್ಯ ಸಂದರ್ಭದಲ್ಲಿ ಅದರ ಸದ್ಬಳಕೆಯು ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಶಿಕ್ಷಣವನ್ನು ದೊರಕಿಸಿಕೊಡಲು, ಮಕ್ಕಳ ಕ್ರಿಯಾಶೀಲತೆಯನ್ನು ಉತ್ತೇಜನಗೊಳಿಸಲು ಒಂದು ಸದವಕಾಶವಾಗಬೇಕು ಎಂದು ಸಲಹೆ ನೀಡಿದರು.
ಸರ್ಕಾರ ತನ್ನ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ನಿರ್ವಹಿಸಬೇಕೆಂಬ ಅಭಿಪ್ರಾಯ ಸಂವಾದದಲ್ಲಿ ಮೂಡಿತು. ಸರ್ಕಾರವು ಈ ಎಲ್ಲ ಸಲಹೆಗಳನ್ನು ತನ್ನ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಮುಕ್ತವಾಗಿ ಅವಲೋಕಿಸುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಸಂವಾದದಲ್ಲಿ ಡಾ. ಗುರುರಾಜ ಕರ್ಜಗಿ, ಡಾ. ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಮ್ಜಿ ಫೌಂಡೇಶನ್ನ ಹೃಷಿಕೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.