ಬೆಂಗಳೂರು : ನೆರೆ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದರಿಂದಾಗಿ ಲಾಕ್ಡೌನ್ ಘೋಷಣೆಯಾಗಿದೆ. ರಾಜ್ಯದ ಕೋವಿಡ್ ಪ್ರಕರಣಗಳಲ್ಲಿಯೂ ನಿಧಾನವಾಗಿ ಏರಿಕೆ ಕಂಡು ಬರುತ್ತಿದೆ. ಟ್ರಾವೆಲ್ ಹಿಸ್ಟರಿಯಿಂದ ಬೆಂಗಳೂರಿನಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿದೆ.
ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ 3ನೇ ಅಲೆ ಆರಂಭದ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿವೆ. ಈ ಬಗ್ಗೆ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ, ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹೆಚ್ಚಳದ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು. ಮೈಕ್ರೋಕಂಟೈನ್ಮೆಂಟ್ ಮಾಡಬೇಕು. ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸಬೇಕು. ಗಡಿ ಭಾಗಗಳಲ್ಲಿಯೂ ಎಚ್ಚರಿಕೆಯಿಂದ ನಿಗಾವಹಿಸಬೇಕೆಂದು ತಿಳಿಸಿದ್ದಾರೆ.
ಪೂರ್ವ, ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಹೆಚ್ಚು ಕೋವಿಡ್
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಮಾತನಾಡಿ, ನಗರದ ಅಲ್ಲಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ. ಕ್ಲಸ್ಟರ್‌ಗಳನ್ನು ಹತ್ತು ಪ್ರಕರಣದಿಂದ ಮೂರಕ್ಕೆ ಇಳಿಸಿ, ಮೈಕ್ರೋಕಂಟೈನ್ಮೆಂಟ್ ಮಾಡಲಾಗ್ತಿದೆ. ನೂರು ಜಾಗಗಳಲ್ಲಿ ಕ್ಲಸ್ಟರ್ಸ್ ಕಂಡು ಬಂದಿದೆ. ಅದರಲ್ಲೂ ನೂರು ಮೀಟರ್‌ನೊಳಗೆ ಹೆಚ್ಚು ಕ್ಲಸ್ಟರ್‌ಗಳು ಕಂಡು ಬಂದಿವೆ ಎಂದರು.
ಪೂರ್ವ ವಲಯ, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಹೆಚ್ಚು ಕೋವಿಡ್ ಕಂಡು ಬಂದಿದೆ. ಅಪಾರ್ಟ್ಮೆಂಟ್ ಹಾಗೂ ಮನೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡು ಬಂದಿವೆ. ಪ್ರತೀ ಕೋವಿಡ್ ಸೋಂಕಿತರ 20-30 ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗ್ತಿದೆ. ಆದರೆ, ಸಂಪರ್ಕಿತರಲ್ಲೂ ಕೋವಿಡ್ ಪಾಸಿಟಿವ್ ಕಂಡು ಬರುತ್ತಿದೆ. ಟಾರ್ಗೆಟ್ ಟೆಸ್ಟಿಂಗ್ ಮಾಡುವುದರಿಂದ ಕೋವಿಡ್ ಸಂಖ್ಯೆಗಳು ಹೆಚ್ಚು ಕಂಡು ಬರುತ್ತಿವೆ ಎಂದು ತಿಳಿಸಿದರು.
ನಗರದ ಪ್ರತೀ ವಲಯಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಹೊರ ರಾಜ್ಯದಿಂದ ಪ್ರಯಾಣ ಹಾಗೂ ಪ್ರವಾಸಕ್ಕೆ ಹೋಗಿ ಬಂದಿರುವುದು ಕಂಡು ಬರುತ್ತಿದೆ. ತಜ್ಞರ ಸಭೆಯಲ್ಲೂ ಈ ಬಗ್ಗೆ ಮಾಹಿತಿ ಬಂದಿದೆ. ಕೇರಳದಿಂದ ಬಂದಿರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ. ವ್ಯಾಕ್ಸಿನ್ ಪಡೆದಿದ್ದರೂ, ಯಾವುದೇ ವಿನಾಯಿತಿ ನೀಡದೆ ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಹೆಚ್ಚು ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ ಎಂದರು.
ವ್ಯಾಕ್ಸಿನ್ ಅಭಾವ ಪಾಲಿಕೆ ಕೈಯಲ್ಲಿಲ್ಲ. ರಾಜ್ಯದಿಂದ ಎರಡು ದಿನಕ್ಕೊಮ್ಮೆ 30-50 ಸಾವಿರ ಡೋಸ್ ಮಾತ್ರ ಬರುತ್ತಿವೆ. ಆಗಸ್ಟ್ 10 ರಿಂದಲೇ 3ನೇ ಅಲೆಯ ನಿರೀಕ್ಷೆ ಇದೆ. ಈ ಅಲೆಯ ಆರಂಭವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. 2ನೇ ಅಲೆ ಹತ್ತು ದಿನದಲ್ಲೇ 5 ಸಾವಿರ ಪ್ರಕರಣಕ್ಕೆ ಏರಿಕೆಯಾಗಿತ್ತು. ಆಗಸ್ಟ್ 10ರಿಂದಲೇ ಈ ನಿರೀಕ್ಷೆ ಇದೆ. ಹೀಗಾಗಿ, ಹಾಸಿಗೆಗಳು, ಮಕ್ಕಳ ತಜ್ಞ ವೈದ್ಯರ ಸಿದ್ಧತೆ ಮಾಡಲಾಗ್ತಿದೆ. ಕಂಟೈನ್ಮೆಂಟ್ ಕೂಡ ಹೆಚ್ಚು ಮಾಡಲಾಗ್ತಿದೆ ಎಂದರು.
ಮಕ್ಕಳಿಗೆ ಶಾಲಾರಂಭಕ್ಕೆ ಅವಸರ ಬೇಡ
ಪಾಲಿಕೆ ವ್ಯಾಪ್ತಿಯಲ್ಲಿ ತಕ್ಷಣವೇ ಶಾಲೆಗಳನ್ನು ಆರಂಭ ಮಾಡುವ ಬದಲು, ಸ್ವಲ್ಪ ಕಾದು ನೋಡಬೇಕಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುವುದಿಲ್ಲ. ಆದರೆ, ಹೆಚ್ಚಾಗುವ ಸಂಕೇತಗಳು ಕಂಡು ಬರುತ್ತಿವೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.
ನಗರದ ಅತ್ತಿಬೆಲೆ, ಹೊಸೂರು ಚೆಕ್ ಪೋಸ್ಟ್ ಗಡಿಭಾಗದಲ್ಲಿ ನಿಗಾವಹಿಸಲಾಗ್ತಿದೆ. ಕೇರಳದ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಮಿಳುನಾಡು ಬಾರ್ಡರ್‌ನಿಂದ ಉದ್ಯೋಗಕ್ಕಾಗಿ ನಗರಕ್ಕೆ ಬಹಳಷ್ಟು ಜನ ಬರುತ್ತಿದ್ದಾರೆ. ಅವರ ಮೇಲೂ ನಿಗಾವಹಿಸಲು ಕಂಪನಿಗಳು, ಗಾರ್ಮೆಂಟ್ಸ್‌ಗಳಿಗೆ ಸೂಚಿಸಲಾಗಿದೆ ಎಂದರು.
ಓದಿ: ಆಯ್ತು ಅಂತಾ ಅಷ್ಟೇ ಅಲ್ಲರೀ, ನೀವು ಕ್ಷಮೆ ಕೇಳಿ ಅವರ ಬಳಿ.. ಜಿಲ್ಲೆಗೊಬ್ರು ಇಂಥ ಒಳ್ಳೇ ಅಧಿಕಾರಿ ಇರ್ಬೇಕ್‌ರೀ..