ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಮೋಸ, ವಂಚನೆ ತಡೆಯಲು ಸಮನ್ವಯ ಸಮಿತಿ ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಆರ್ಥಿಕ ಅಪರಾಧಗಳ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ವಿಧಾನಸೌಧದಲ್ಲಿ ಇಂದು ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ ಹಿರಿಯ ಅಧಿಕಾರಿಗಳು, ಕೆಲ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಯಾಂಕಿಂಗ್ ಕ್ಷೇತ್ರದವರು, ಐ.ಟಿ ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮನ್ವಯ ಸಮಿತಿಯಲ್ಲಿರುತ್ತಾರೆ. ಸಿಐಡಿ ಹಿರಿಯ ಅಧಿಕಾರಿಯೊಬ್ಬರು ನೋಡಲ್ ಅಧಿಕಾರಿಯಾಗಿರುತ್ತಾರೆ. ಸಾಮಾನ್ಯ ಜನರ ಅಕೌಂಟ್ ಹಣ ಸುರಕ್ಷಿತವಾಗಿರಬೇಕಾಗುತ್ತದೆ. ಹಾಗಾಗಿ, ಸೈಬರ್ ಕ್ರೈಂ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪರಾಧ ಹೆಚ್ಚುತ್ತಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್ಗಳನ್ನು ನಕಲಿ ಮಾಡಿ ಜನರ ಖಾತೆಗಳಲ್ಲಿನ ಹಣ ಲಪಟಾಯಿಸೋದು ಸೇರಿ ಸಾಕಷ್ಟು ಅಪರಾಧಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿವೆ. ಇದಕ್ಕೆ ಬ್ರೇಕ್ ಹಾಕುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪರಾಧ ತಡೆಗೆ ಶೀಘ್ರ ಕ್ರಮ ಕೈಗೊಳ್ಳುವುದು ಎಂದರು.
ಬ್ಯಾಂಕ್ಗಳ ಹಾಗೂ ಗ್ರಾಹಕರ ಮಾಹಿತಿಗಳು ಸೋರಿಕೆಯಾಗುತ್ತಿವೆ. ಹಣಕಾಸು ಇಲಾಖೆ, ಸಿಐಡಿ, ಕಾನೂನು ತಜ್ಞರು, ಆರ್ಬಿಐ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿದ್ದೇನೆ. ಐಟಿ ತಜ್ಞರ ಜೊತೆಯೂ ಚರ್ಚೆ ಮಾಡುತ್ತೇನೆ. ಅವರೂ ಕೂಡ ಸಹಕಾರ ನೀಡಲಿದ್ದಾರೆ. ಸೈಬರ್ ಕ್ರೈಂ ತಡೆಗೆ ಕ್ರಮ ಕೈಗೊಳ್ಳುತ್ತಿದ್ದು, ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಬ್ಯಾಂಕ್ಗಳು ಅಳವಡಿಸಿಕೊಳ್ಳಬೇಕು. ನಿಯಮಗಳನ್ನು ಜಾರಿ ಮಾಡುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಗೃಹ ಸಚಿವರು ಹೇಳಿದ್ರು.
ಬ್ಯಾಂಕ್ ಗಳ ಡಿಜಟಲಿಕರಣ ಆದ ಬಳಿಕ ಸಾಮಾನ್ಯ ಜನರಿಗೆ ವಂಚನೆ, ಮೋಸ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೋಸ ಹೀಗೆ ಹಲವು ರೀತಿಯಲ್ಲಿ ವಂಚನೆಯಾಗುತ್ತಿದೆ. ಸರ್ಕಾರದ ಅಕೌಂಟ್ ನಿಂದಲೂ ಹಣ ಮೋಸದಿಂದ ಟ್ರಾನ್ಸಫರ್ ಮಾಡಲಾಗುತ್ತದೆ. ಈ ತರಹ ಹಲವು ವಂಚನೆಗಳು ನಡೆಯುತ್ತಿವೆ. ಹೀಗಾಗಿ, ಎಲ್ಲಾ ಬ್ಯಾಂಕರ್ಸ್, ಬ್ಯಾಂಕ್ ಗಳ ಪ್ರತಿನಿಧಿಗಳಿಗೆ ಕೆಲವು ಸೂಚನೆ ನೀಡಲಾಗಿದೆ. ಬ್ಯಾಂಕ್ನಿಂದ ಬ್ಯಾಂಕ್ಗೆ, ಬ್ಯಾಂಕ್ನಿಂದ ಗ್ರಾಹಕನಿಗೆ ಮಾಹಿತಿ ವಿನಿಮಯ ಆಗಬೇಕಿದೆ ಎಂದರು.
ತಂತ್ರಜ್ಞಾನದ ದುರುಪಯೋಗ ಆಗುತ್ತಿದೆ. ಎಪಿಎಂಸಿ ಅಕೌಂಟ್ನಲ್ಲಿಯೇ 47 ಕೋಟಿ ರೂ. ಮೋಸ ಆಗಿತ್ತು. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇಂತಹ ಮೋಸ, ವಂಚನೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೋಸ ತಡೆಯಲು ಸಿಂಗಲ್ ವಿಂಡೋ ಸಿಸ್ಟಂ:
ಡಿಜಿಟಲ್ ಬ್ಯಾಂಕಿಂಗ್ ಮೋಸ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಕಲಿ ಕಸ್ಟಮರ್ ಕೇರ್ ಕರೆ ತಡೆಗಟ್ಟಲು 'ಸಿಂಗಲ್ ವಿಂಡೋ' ಸಿಸ್ಟಂ ತಂದರೆ ಮೋಸ ತಡೆಯಬಹುದು ಎಂದು ಹೇಳಿದರು.
ಅಕೌಂಟಿನಿಂದ ದುಡ್ಡು ಕಳೆದುಕೊಂಡವರು, ಮೋಸಕ್ಕೊಳಗಾದವರು ಒಂದು ವಾಟ್ಸಾಪ್ ಮೆಸೆಜ್ ಮಾಡುವ ಮೂಲಕ ದೂರು ದಾಖಲಿಸಬಹುದು. ಇದಕ್ಕಾಗಿ ಸದ್ಯದಲ್ಲೇ ಒಂದು ವಾಟ್ಸಾಪ್ ನಂಬರ್ ಕೊಡುತ್ತೇವೆ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತಿದ್ದು, ಸಮಿತಿ ಸಲಹೆಗಳ ಮೇಲೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.