ಬೆಂಗಳೂರು: ನಗರದಲ್ಲಿ ಕಳಪೆ ಗುಣಮಟ್ಟದ ರಸ್ತೆ ಗುಂಡಿ ಕಾಮಗಾರಿ ಕಂಡುಬಂದರೆ ನೇರವಾಗಿ ಗುತ್ತಿಗೆದಾರರೇ ಸರಿಪಡಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಾಕೀತು ಮಾಡಿದೆ.
ರಸ್ತೆ ಗುಂಡಿ ಮುಚ್ಚುವ ಕುರಿತು ಸೂಚನೆಗಳನ್ನು ನೀಡಿರುವ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ದೋಷಮುಕ್ತ ಅವಧಿ (ಡಿಎಲ್‌ಪಿ) ಇರುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೆ ಅದನ್ನು ಗುತ್ತಿಗೆದಾರರಿಂದಲೇ ಮುಚ್ಚಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಬೇಕಾದರೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಪೈಕಿ ಮೊದಲಿಗೆ ರಸ್ತೆ ಗುಂಡಿ ಬಿದ್ದಿರುವ ಸ್ಥಳ ಸ್ವಚ್ಛಗೊಳಿಸಬೇಕು. ನಂತರ ಗುಂಡಿಯ ನಾಲ್ಕೂ ಕಡೆ ಚೌಕಾಕಾರವಾಗಿ ಕತ್ತರಿಸಿಕೊಂಡು, ಟ್ಯಾಕ್ ಕೋಟ್ ಸ್ಪ್ರೇ ಮಾಡಿ, ನಿರ್ದಿಷ್ಟ ತಾಪಮಾನದ ಡಾಂಬರು ಮಿಶ್ರಣವನ್ನು ಹಾಕಿ ರೋರಲ್ ಮೂಲಕ ರೋಲ್ ಮಾಡಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿ ರಸ್ತೆಗಳು ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆ ಮಾಡಿದಂತಿದೆ: ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ನಾಗರಿಕರೊಂದಿಗೆ ಸಮನ್ವಯ ಸಾಧಿಸಿ: ಬಿಬಿಎಂಪಿ ಮಾಡುವ ಕೆಲಸದಲ್ಲಿ ನಾಗರಿಕರೊಂದಿಗೆ ಸಮನ್ವಯ ಸಾಧಿಸಬೇಕು. ಸರಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಪಾಲಿಕೆಯ ಮೇಲೆ ಉತ್ತಮ ಅಭಿಪ್ರಾಯ ಮೂಡುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕೆಲಸ ಮಾಡಬೇಕು. ಸ್ಥಳೀಯವಾಗಿ ಏನಾದರೂ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಕೆಲಸ ಮಾಡಬೇಕು. ಜೊತೆಗೆ ಸ್ಥಳೀಯ ಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಿ ರಸ್ತೆಗುಂಡಿಗಳನ್ನು ಮುಚ್ಚಿ ಬೆಂಗಳೂರು ನಗರವನ್ನು ನಿಗದಿತ ಅವಧಿಯೊಳಗೆ ರಸ್ತೆ ಗುಂಡಿ ಮುಕ್ತ ನಗರವನ್ನಾಗಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.