ಬೆಂಗಳೂರು : ಸಮಗ್ರ ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆಯಡಿ ಮೊದಲ ಹಂತವಾಗಿ ಎ ಶ್ರೇಣಿಯ 25 ದೇಗುಲಗಳನ್ನು ಪರಿಗಣಿಸಲಾಗಿದೆ. ಬಳಿಕ ಹಂತ ಹಂತವಾಗಿ ಬಿ ಮತ್ತು ಸಿ ಶ್ರೇಣಿಯ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಸಮಗ್ರ ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಅಶೋಕ್ ಉತ್ತರ ನೀಡಿದರು. ಯೋಜನೆಯಡಿ ಇಡೀ ರಾಜ್ಯದಲ್ಲಿ 31 ಜಿಲ್ಲೆಯಲ್ಲಿ 25 ಎ ಗ್ರೇಡ್ ದೇಗುಲ ಗುರುತು ಮಾಡಲಾಗಿದೆ.
ಎರಡನೇ, ಮೂರನೇ ಹಂತದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ. ಹೆಚ್ಚು ಆದಾಯ ಬರುವ ದೇವಾಲಯಗಳಿಗೆ ಮೊದಲ ಆದ್ಯತೆ ನೀಡಿದ್ದು, ಎರಡನೇ ಹಂತದ ಆದಾಯ ಬರುವ ದೇವಸ್ಥಾನಕ್ಕೆ ಎರಡನೇ ಆದ್ಯತೆ ನೀಡಲಾಗುತ್ತದೆ. ನಂತರ ಎಲ್ಲಾ ದೇಗುಲಗಳನ್ನು ಪರಿಗಣಿಸಲಾಗುತ್ತದೆ ಎಂದರು.
ಸದ್ಯ ಯೋಜನೆ ಆರಂಭ ಮಾಡಿದ್ದೇವೆ ಅಷ್ಟೇ, ಹಂತ ಹಂತವಾಗಿ ಎಲ್ಲಾ ದೇವಾಲಯಗಳನ್ನೂ ಯೋಜನೆಗೆ ಪರಿಗಣಿಸಲಾಗುತ್ತದೆ. ಈಗ ಕಲ್ಯಾಣ ಕರ್ನಾಟಕ ಭಾಗದ ಒಂದು ದೇವಾಲಯ ಪರಿಗಣಿಸಿದ್ದು, ನಂತರದ ದಿನಗಳಲ್ಲಿ ಉಳಿದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದು ಉತ್ತರ ನೀಡಿದರು.
10 ಪಥದ ರಸ್ತೆ ಡಿಸೆಂಬರ್ಗೆ ಪೂರ್ಣ : ಬೆಂಗಳೂರು ಮೈಸೂರು ನಡುವಿನ 10 ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ 2022ರ ಡಿಸೆಂಬರ್ಗೆ ಪೂರ್ಣಗೊಳ್ಳಲಿದೆ. ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲ. ಇಲಾಖೆಯಿಂದ ತಪಾಸಣೆ ನಡೆಸಿ ಕಳಪೆ ಕಾಮಗಾರಿ ಕಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹೇಳಿದರು.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ.10 ಪಥದ ರಸ್ತೆ ನಿರ್ಮಾಣವಾಗುತ್ತಿದೆ. ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸಲಾಗುತ್ತದೆ ಎಂದರು.
ಕಾಮಗಾರಿಯಲ್ಲಿ ಕೆಲ ಅಂಡರ್ ಪಾಸ್ ಕಳಪೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ, ಇಲಾಖೆಯಿಂದಲೇ ಗುಣಮಟ್ಟ ಪರಿಶೀಲಿಸಲಿದ್ದೇವೆ. ಲೋಪ ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯ ಜೀರ್ಣೋದ್ದಾರ : 900 ವರ್ಷ ಇತಿಹಾಸವಿರುವ ಹೊಳೆನರಸೀಪುರದ ಲಕ್ಷ್ಮೀನರಸಿಂಹ ದೇವಾಲಯದ ಜೀರ್ಣೋದ್ದಾರ ಕುರಿತು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೇವಣ್ಣನವರು ಭಕ್ತಿ ಅಂತಾ ಗೊತ್ತಿತ್ತು. ಆದರೆ, ಅವರ ಪುತ್ರ ಸೂರಜ್ ಕೂಡ ಮೊದಲ ಪ್ರಶ್ನೆಯನ್ನು ನನಗೆ ದೇವರ ಬಗ್ಗೆಯೇ ಕೇಳಿದ್ದಾರೆ. ಹಾಗಾಗಿ, ಅವರನ್ನು ಅಭಿನಂದಿಸುತ್ತೇನೆ ಎಂದರು.
ಲಕ್ಷ್ಮಿನರಸಿಂಹ ದೇವಾಲಯದ ಜೀರ್ಣೋದ್ದಾರದ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಜಿಲ್ಲಾಧಿಕಾರಿ ವರದಿ ಬೇಕಿದೆ, ಈ ಬಗ್ಗೆ ಡಿಸಿಗೆ ಸೂಚನೆ ಕೊಡುತ್ತೇನೆ. ಡಿಸಿಯಿಂದ ಪ್ರಸ್ತಾವನೆ ಬಂದಲ್ಲಿ ಜೀರ್ಣೋದ್ದಾರಕ್ಕೆ ಕ್ರಮವಹಿಸಲಾಗುತ್ತದೆ. ಜಿಲ್ಲಾಧಿಕಾರಿ ಪ್ರಸ್ತಾವನೆ, ಪುರಾತತ್ವ ಇಲಾಖೆ ಒಪ್ಪಿಗೆ ಬೇಕಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಕುದುರೆ ವ್ಯಾಪಾರದಿಂದ ಬಿಜೆಪಿಗೆ ಅಧಿಕಾರ : ತಿಮ್ಮಾಪೂರ್ ಟೀಕೆ
ಈ ವೇಳೆ ಇದಕ್ಕೆಲ್ಲಾ ಎಷ್ಟು ಸಮಯ ಬೇಕಾಗಲಿದೆ ಎನ್ನುವ ಪ್ರಜ್ವಲ್ ಪ್ರಶ್ನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೇವಣ್ಣಗೆ ಗೊತ್ತು ಕೇಳಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ರೇವಣ್ಣರನ್ನ ಕೇಳಿ ಸಮಯ ನೋಡಿ ಜೀರ್ಣೋದ್ದಾರ ಕಾರ್ಯ ಆರಂಭಿಸಿ ಎಂದು ಹಾಸ್ಯ ಮಾಡಿದರು.
ಇದಕ್ಕೆ ಹಾಸ್ಯವಾಗಿಯೇ ಉತ್ತರಿಸಿದ ಸಚಿವ ಅಶೋಕ್, ರೇವಣ್ಣ ಸದನಕ್ಕೆ ಬಂದರು ಅಂದರೆ ರಾಹುಕಾಲ ಎಲ್ಲಾ ಮುಗಿದಿದೆ ಎಂದೇ ಅರ್ಥ. ಸಮಯ ನೋಡಿಯೇ ಅವರು ಸದನಕ್ಕೆ ಬರುತ್ತಾರೆ. ಒಮ್ಮೊಮ್ಮೆ ಪಾದರಕ್ಷೆ ಹಾಕಿಕೊಂಡು ಬರುತ್ತಾರೆ ಮತ್ತೆ ಕೆಲವೊಮ್ಮೆ ಬರಿಗಾಲಿನಲ್ಲೇ ಬರುತ್ತಾರೆ. ಅವರ ಪುತ್ರ ಪ್ರಜ್ವಲ್ ಕೂಡ ಪ್ರಶ್ನೋತ್ತರ ಕಲಾಪದ ಆರಂಭದಲ್ಲಿ ಬಾರದೆ, ಅವರ ಪ್ರಶ್ನೆ ಬರುವ ವೇಳೆ ಬಂದಿದ್ದಾರೆ ಎಂದು ಕಾಲೆಳೆದರು.
ವಿಪತ್ತು ಪರಿಹಾರ ನಿಧಿ ಹೆಚ್ಚಳಕ್ಕೆ ಪತ್ರ : ಕೇಂದ್ರ ವಿಪತ್ತು ಪರಿಹಾರ ನಿಧಿಯಡಿ ವಿತರಿಸುವ ಪರಿಹಾರದ ಮೊತ್ತ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಸಂಬಂಧ ಮಾತುಕತೆ ನಡೆಸಲಾಗುತ್ತಿದೆ. ಪರಿಹಾರ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಪತ್ತು ಪರಿಹಾರ ನಿಧಿಯನ್ನು ಮನಮೋಹನ್ ಸಿಂಗ್ ಕಾಲದಲ್ಲಿ ಮಾಡಲಾಗಿತ್ತು. ಅದರ ಪ್ರಕಾರವೇ ಪರಿಹಾರದ ಹಣ ನೀಡಲಾಗುತ್ತಿದೆ. ಹಣವನ್ನು ಹೆಚ್ಚು ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ.
1:3ರಷ್ಟು ಪರಿಹಾರ ಹೆಚ್ಚಿಸಬೇಕಿದೆ. ಕೇಂದ್ರ ಕೊಡುತ್ತಿರುವ ಪರಿಹಾರದ ಹಣದ ಜೊತೆಗೆ ರಾಜ್ಯದಿಂದಲೂ ಪರಿಹಾರ ನೀಡಲಾಗುತ್ತಿದೆ. ಬೆಳೆಹಾನಿ ವೇಳೆ ನೇರವಾಗಿ ಸಂಬಂಧಪಟ್ಟವರ ಖಾತೆಗೆ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಸದ್ಯ ಪರಿಹಾರದ ಹಣ ಹೆಚ್ಚಿಸಬೇಕಿದ್ದು, ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕಸಲ್ಲಿದ್ದೇವೆ ಎಂದರು.
ಆತ್ಮಸಾಕ್ಷಿಯ ಚರ್ಚೆ : ಪ್ರಶ್ನೆ ಕೇಳಿದ ಸಲೀಂ ಅಹಮದ್ ಆತ್ಮಸಾಕ್ಷಿಯಾಗಿ ಸಚಿವ ಆರ್ ಅಶೋಕ್ ಉತ್ತರ ನೀಡಬೇಕು, ಪರಿಹಾರದ ಮೊತ್ತ ಸಾಕಾಗುತ್ತದೆಯೇ ಎಂದು ಹೇಳಬೇಕು ಎಂದರು. ಇದಕ್ಕೆ ಉತ್ತರಿಸಿದ ಸಚಿವ ಅಶೋಕ್, ಈಗ ಆತ್ಮಸಾಕ್ಷಿಯನ್ನು ಹುಡುಕಿಕೊಂಡು ಹೋಗಲು ಸಾಧ್ಯವಿಲ್ಲ, ವಸ್ತುಸ್ಥಿತಿಯ ಉತ್ತರ ನೀಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.