ಬೆಂಗಳೂರು: ಜನದಟ್ಟಣೆ ಕಡಿಮೆ ಮಾಡಲು ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಯಾಗುತ್ತಲೇ ಇದ್ದು, ಇದೀಗ ಡಬಲ್ ಡೆಕ್ಕರ್ ಯೋಜನೆಗೆ ಸಿದ್ಧತೆ ನಡೆಯುತ್ತಿದೆ. ನಮ್ಮ ಮೆಟ್ರೋ 3ನೇ ಹಂತದ ಭಾಗವಾಗಿ ಡಬಲ್ ಡೆಕ್ಕರ್ ಯೋಜನೆಗೆ ಕೈಗೊಳ್ಳಲಾಗಿದೆ. ಈಗಾಗಲೇ ಜಿಯೋಟೆಕ್ನಿಕಲ್ ಸರ್ವೇ ನಡೆಸುತ್ತಿರುವ ನಮ್ಮ ಮೆಟ್ರೋ ಈಗ ಎತ್ತರಿಸಿದ ಮಾರ್ಗ, ನಿಲ್ದಾಣಗಳ ವಿನ್ಯಾಸವನ್ನು ಅಂತಿಮಗೊಳಿಸಲು ಮುಂದಾಗಿದೆ.
ಟೆಂಡರ್ ಕರೆದ ಬಿಎಂಆರ್‌ಸಿಎಲ್: ಮೂರನೇ ಹಂತದ ಮೆಟ್ರೋ ಯೋಜನೆ ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಸೇರಿ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ 15,611 ಕೋಟಿ ರೂ ಮೊತ್ತದ ಯೋಜನೆಗೆ ಅನುಮತಿ ಕೊಟ್ಟ ಬಳಿಕ ಯೋಜನೆ ಅನುಷ್ಠಾನದ ಪ್ರಕ್ರಿಯೆ ಚುರುಕುಗೊಂಡಿದೆ. ಇದೀಗ ಮೂರು ಹಂತದಲ್ಲಿ ಡಬಲ್ ಡೆಕ್ಕರ್ ಯೋಜನೆಯ ವಿನ್ಯಾಸಕ್ಕಾಗಿ ಬಿಎಂಆರ್‌ಸಿಎಲ್ ಮೂರು ಹಂತಗಳಲ್ಲಿ ಟೆಂಡರ್ ಕರೆದಿದೆ.
ಸುಮನಹಳ್ಳಿ ಕ್ರಾಸ್ ಸ್ಟೇಷನ್‌ನಿಂದ ಕಡಬಗೆರೆ, ಕೆಂಪಾಪುರದವರೆಗೆ ಹಾಗೂ ಜೆ.ಪಿ.ನಗರ ಸ್ಟೇಷನ್‌ನಿಂದ ಬಿಡಿಎ ಕಾಂಪ್ಲೆಕ್ಸ್, ನಾಗರಬಾವಿ ಸ್ಟೇಷನ್‌ವರೆಗೆ ಡಬಲ್ ಡೆಕ್ಕರ್ ಮಾರ್ಗ, ನಿಲ್ದಾಣಗಳು, ರ್ಯಾಂಪ್‌ಗಳ ನಿರ್ಮಾಣಕ್ಕಾಗಿ ವಿನ್ಯಾಸ ಅಂತಿಮ ರೂಪ ಪಡೆಯಲಿದೆ. ಇದರ ಜೊತೆಗೆ ಪೀಣ್ಯ ಹಾಗೂ ಸುಮನಹಳ್ಳಿ ಬಳಿ ಡಿಪೋ, ಸ್ಕೈವಾಕ್, ಬಹುಮಾದರಿಯ ಸಾರಿಗೆ ವ್ಯವಸ್ಥೆ ನಿರ್ಮಾಣವನ್ನು ಯಾವ ರೀತಿ ನಿರ್ಮಿಸಬೇಕು ಎಂಬುದರ ಬಗ್ಗೆ ನಿಗಮ ಸಲಹಾ ವರದಿ ಪಡೆಯಲಿದೆ.
ಮೆಟ್ರೋ ಮೂರನೇ ಹಂತದ 44.65 ಕಿ.ಮೀ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಪ್ಯಾಕೇಜ್‌ನಲ್ಲಿ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ 299 ಆಸ್ತಿಗಳನ್ನು ಗುರುತಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ ಸಲ್ಲಿಸಲಾಗಿದೆ. ಎರಡನೇ ಪ್ಯಾಕೇಜ್‌ನಲ್ಲಿ ಭೂಸ್ವಾಧೀನಕ್ಕಾಗಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮೂರನೇ ಹಂತದ ಮೆಟ್ರೋ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ ಬಳಿಕ ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಹೀಗಾಗಿ ಕೇಂದ್ರದಿಂದ ಸದ್ಯದ ಯೋಜನಾ ವೆಚ್ಚ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ. ಡಬಲ್ ಡೆಕ್ಕರ್ ಯೋಜನೆಗೆ ಬೇಕಾಗುವ ಹಣವನ್ನು ಹೇಗೆ ಹೊಂದಿಸಬೇಕೆನ್ನುವುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾಗಸಂದ್ರ-ಮಾದಾವರ ನಮ್ಮ ಮೆಟ್ರೋ ಆರಂಭ: ಮೊದಲ ದಿನ ಆರು ಸಾವಿರಕ್ಕೂ ಹೆಚ್ಚು ಜನರ ಪ್ರಯಾಣ