ಬೆಂಗಳೂರು: ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ನ ಟೀಕಾಪ್ರಹಾರ ಮುಂದುವರೆದಿದೆ. ಮೊನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೈಗೊಂಬೆ ಸಿಎಂ ಹಾಗೂ '3ನೇ ಸಿಎಂ' ಎಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್, ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುರಿತು ಟ್ವೀಟ್ ಮಾಡಿ ಕಾಲೆಳೆದಿದೆ.
ಕರ್ನಾಟಕ ಬಿಜೆಪಿ ಗೊಂದಲಗಳಿಗೆ ಕಾಂಗ್ರೆಸ್ ಹೊಣೆಯೇ? ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದರೆ, ಯಾರು ಹೇಳಿದವರು ಎಂದು ನಳಿನ್ ಕುಮಾರ್ ಕಟೀಲ್ ಕೇಳುತ್ತಾರೆ. ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ ಎಂದು ವ್ಯಂಗ್ಯವಾಡಿದೆ.
![congress-tweets-on-state-bjp-president-change-rumor](https://etvbharatimages.akamaized.net/etvbharat/prod-images/16075788_thumb2222.jpg)
ಅಲ್ಲದೇ, ಮೋದಿಜಿಯವರ 'ಡಿಜಿಟಲ್ ಇಂಡಿಯಾ' ಘೋಷಣೆಗೆ ರಾಜ್ಯ ಬಿಜೆಪಿ ಸರ್ಕಾರ ಸಮರ್ಥ ಅರ್ಥ ಕೊಡುತ್ತಿದೆ. ಅದೂ ಅಕ್ರಮ ನಡೆಸುವುದರಲ್ಲಿ ಮಾತ್ರ. ಎಲ್ಲ ನೇಮಕಾತಿ ಪರೀಕ್ಷೆಗಳಲ್ಲೂ ಬ್ಲೂಟೂತ್, ಫೋನ್, ಸ್ಮಾರ್ಟ್ ವಾಚ್‌ಗಳೇ ಕೆಲಸ ಮಾಡುತ್ತಿವೆ. ಶೇ.40ರಷ್ಟು ಕಮಿಷನ್ ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದ 'ಸರ್ಕಾರಿ ಹುದ್ದೆ ಮಾರಾಟ ಯೋಜನೆ' ಎಗ್ಗಿಲ್ಲದೇ ಸಾಗುತ್ತಿದೆ ಎಂದು ಲೇವಡಿ ಮಾಡಿದೆ.
ಹಲವು ಇಲಾಖೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳನ್ನು ಖಾಲಿ ಉಳಿಸಿದೆ ಸರ್ಕಾರ, ಇನ್ನರ್ಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ. ಸಿಬ್ಬಂದಿ ಕೊರತೆಯಿಂದ ಆಡಳಿತ ಯಂತ್ರ ಕುಂಟುತ್ತಿದ್ದರೂ ನೇಮಕಾತಿಗೆ ಮುಂದಾಗದಿರುವುದೇಕೆ ರಾಜ್ಯ ಬಿಜೆಪಿ ನಾಯಕರೇ?. ಖಜಾನೆ ಖಾಲಿಯಾಗಿದೆಯೇ ಅಥವಾ ಶೇ.40ರಷ್ಟು ಕಮಿಷನ್ ಲೂಟಿಗಾಗಿ ಸೂಕ್ತ ಸಮಯ ಕಾಯಲಾಗುತ್ತಿದೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.
ಇದನ್ನೂ ಓದಿ: ನಾನು ಸ್ಥಿತಪ್ರಜ್ಞನಿದ್ದೇನೆ: ಕಾಂಗ್ರೆಸ್ ಸಿಎಂ ಬದಲಾವಣೆ ಟ್ವೀಟ್ಗೆ ಸಿಎಂ ತಿರುಗೇಟು