ಬೆಂಗಳೂರು : ಖಾಸಗಿ ವಿಧೇಯಕ ಮಂಡಿಸಲು ಅವಕಾಶ ಸಿಗಲಿಲ್ಲಿ ಎಂದು ಸದನದ ಬಾವಿಗಿಳಿದು ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯ ರಘು ಆಚಾರ್ ವಿರುದ್ಧ ಪಕ್ಷದ ಸೂಚನೆ ಪಾಲಿಸದ ಆರೋಪದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
ಸದನದ ಬಾವಿಯಲ್ಲಿ ಧರಣಿ ನಡೆಸುವ ವೇಳೆ ಪ್ರತಿಭಟನೆ ಕೈಬಿಟ್ಟು ವಾಪಸ್ ಬರುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಸ್ವತಃ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೂಚನೆ ನೀಡಿದರೂ ಕೇಳದೆ ಧರಣಿ ಮುಂದುವರೆಸಿದರು. ಇದರಿಂದ ಅಸಮಾಧಾನಗೊಂಡ ಎಸ್.ಆರ್.ಪಾಟೀಲ್ ಆಚಾರ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಪಕ್ಷದ ಸಚೇತಕ ನಾರಾಯಣಸ್ವಾಮಿಗೆ ಸೂಚನೆ ನೀಡಿದ್ದಾರೆ.
ಪ್ರತಿಪಕ್ಷದ ನಾಯಕರೂ ಸೇರಿದಂತೆ ಯಾರ ಮಾತಿಗೂ ಬಗ್ಗದ ಸದನದಲ್ಲಿ ಪಕ್ಷದ ನಾಯಕರ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪದ ಮೇಲೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪರಿಷತ್ ಸದಸ್ಯ ರಘು ಆಚಾರ್ ವಿರುದ್ಧ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ರಿಂದ ಶಿಸ್ತು ಕ್ರಮದ ಎಚ್ಚರಿಕೆ ಬೆನ್ನೆಲ್ಲೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಘು ಆಚಾರ್ ಭೇಟಿ ಮಾಡಿದರು.
ವಿಧಾನಸಭಾಂಗಣದ ಪ್ರತಿಪಕ್ಷ ಸದಸ್ಯರ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸದನದಲ್ಲಿ ಧರಣಿ ನಡೆಸಿದ ಬಗ್ಗೆ ಸ್ಪಷ್ಟನೆ ನೀಡಿದರು. ಖಾಸಗಿ ಬಿಲ್ ಮಂಡನೆ ಕುರಿತು ಸಿದ್ದರಾಮಯ್ಯಗೆ ಸ್ಪಷ್ಟನೆ ಕೊಟ್ಟು ಶಿಸ್ತು ಕ್ರಮದಿಂದ ಪಾರಾಗುವ ತಂತ್ರ ಅನುಸರಿಸಿದ್ದಾರೆ.