ಬೆಂಗಳೂರು : ಸೋಮವಾರದಿಂದ ಆರಂಭವಾಗುವ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಹತ್ತು ದಿನಗಳ ಕಾಲ ವಿಧಾನಸೌಧದಲ್ಲಿ ನಡೆಯುವ ಉಭಯ ಸದನಗಳ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಾಕಷ್ಟು ಸಿದ್ಧತೆ ಕೈಗೊಂಡಿದೆ.
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ನಾಳೆಯ ಅಧಿವೇಶನ ಕೇವಲ ಸಂತಾಪಕ್ಕೆ ಸೀಮಿತವಾಗಬಹುದು. ಆದ್ದರಿಂದ ನಾಳೆ ಸುಮ್ಮನಿದ್ದು, ನಾಡಿದ್ದಿನಿಂದ ತಮ್ಮ ತಂತ್ರಗಾರಿಕೆಯ ಪ್ರಯೋಗವನ್ನು ಹಂತ ಹಂತವಾಗಿ ಆದ್ಯತೆ ಮೇರೆಗೆ ಬಿಚ್ಚಿಡಲು ಕಾಂಗ್ರೆಸ್ ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಸಹ ಸಾಕಷ್ಟು ವಿಸ್ತೃತವಾಗಿ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆ ಹೆಣೆಯುವ ಕಾರ್ಯ ಆಗಲಿದೆ. ಆದರೆ ಮಂಗಳವಾರ ಬೆಳಗ್ಗೆಯೇ ಹೋರಾಟದ ಪ್ರಮುಖ ಅಸ್ತ್ರವೊಂದನ್ನು ಪ್ರಯೋಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಮುಂದಿರುವ ಆಯ್ಕೆಗಳು : ಕಾಂಗ್ರೆಸ್ ಬಳಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಾಕಷ್ಟು ಅಸ್ತ್ರಗಳಿವೆ. ಪ್ರಮುಖವಾಗಿ ಬೆಂಗಳೂರು ಮಹಾನಗರದಲ್ಲಿ ಮಳೆಹಾನಿಗೆ ಕೈಗೊಂಡ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಒತ್ತಡ ಹೇರುವುದು, ಸರ್ಕಾರದ 40% ಕಮೀಷನ್ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿಯುವುದು, ರಾಜ್ಯಾದ್ಯಂತ ಮಳೆ ಹಾನಿಯಿಂದಾಗಿ ಉಂಟಾಗಿರುವ ಸಮಸ್ಯೆಗೆ ಸರ್ಕಾರ ಕೈಗೊಂಡ ಕ್ರಮಗಳ ವಿವರ ಕೇಳುವ ಜತೆಗೆ ಇಂಧನ, ಕಂದಾಯ, ಗೃಹ, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಕಾಂಗ್ರೆಸ್ ಶಾಸಕಾಂಗ ಸಭೆ : ಮಂಗಳವಾರ ಸಂಜೆ ಶಾಸಕಾಂಗ ಸಭೆಯಲ್ಲಿ ಯಾವ ವಿಚಾರವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು, ಯಾರ್ಯಾರು ಯಾವ ವಿಚಾರದ ಮೇಲೆ ಚರ್ಚೆ ಕೈಗೊಳ್ಳಬೇಕೆಂದು ತೀರ್ಮಾನವಾಗಲಿದೆ. ಮಂಗಳವಾರ ಬೆಳಗ್ಗೆ ಅಧಿವೇಶನದಲ್ಲಿ ಅದರಲ್ಲಿಯೂ ಉಭಯ ಸದನಗಳಲ್ಲಿ ಬೆಂಗಳೂರು ನಗರ ಮುಳುಗಿರುವ ವಿಚಾರವನ್ನು ಪ್ರಸ್ತಾಪಿಸಿ ಪ್ರಶ್ನೆ ಕೇಳುವ ಸಾಧ್ಯತೆ ಇದೆ. ಸೂಕ್ತ ಮಾಹಿತಿ ಸಿಗದಿದ್ದರೆ ಗದ್ದಲದ ವಾತಾವರಣ ಸೃಷ್ಟಿಸುವ, ಸದನದ ಒಳಗೆ-ಹೊರಗೆ ಹೋರಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ : ಸರ್ಕಾರದ ವಿರುದ್ಧ ಮುಗಿಬೀಳಲು ಸಿಗುವ ಪ್ರತಿಯೊಂದು ಅವಕಾಶವನ್ನೂ ಸದ್ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಿರುವ ಕಾಂಗ್ರೆಸ್ ಈ ಸಾರಿ ಕಲಾಪದಲ್ಲಿ ಗೃಹ, ಕಂದಾಯ, ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಹೆಚ್ಚಾಗಿದೆ. ಎಎಸ್ಐ ನೇಮಕ ಅಕ್ರಮ, ರುಪ್ಸಾ ಸಂಸ್ಥೆ ಪ್ರಧಾನಿಗೆ ಬರೆದ ಪತ್ರ, ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ವರ್ಷ ಕಳೆದರೂ ಇದಕ್ಕೆ ಒಂದು ಉತ್ತರ ಸಿಗದಿರುವುದು, ಭ್ರಷ್ಟಾಚಾರ, ನಗರ ಸೇರಿದಂತೆ ರಾಜ್ಯಾದ್ಯಂತ ಮಳೆಯಿಂದಾಗಿ ಆಗುತ್ತಿರುವ ಅನಾಹುತ, ರಾಜ್ಯಾದ್ಯಂತ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಘೋಷಿಸದಿರುವುದು, ಬೆಂಗಳೂರು-ಮೈಸೂರು ಹೆದ್ದಾರಿ ಅವ್ಯವಸ್ಥೆ ಇನ್ನೂ ಹಲವು ವಿಚಾರವನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡಲು ತೀರ್ಮಾನಿಸಿದೆ.
ರಾಜ್ಯ ಸರ್ಕಾರ ತಮ್ಮ ವಾದ, ಆರೋಪಗಳಿಗೆ ಚರ್ಚಿಸುವ ಅವಕಾಶ ನೀಡದಿದ್ದರೆ ಏನು ಮಾಡಬೇಕೆಂಬುದನ್ನು ಕೂಡ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ತಮ್ಮ ಅವಧಿಯ ಕೆಲ ಹಗರಣಗಳ ಪ್ರಸ್ತಾಪ ಮಾಡಿದರೆ ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕೆಂಬುದಕ್ಕೂ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ. ಒಟ್ಟಾರೆ ನಾಳೆ ಆರಂಭವಾಗುವ ಅಧಿವೇಶನದಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಏನಿರಲಿದೆ, ಯಾವ ದಾಳವನ್ನು ಸರ್ಕಾರದ ಮೇಲೆ ಮೊದಲು ಎಸೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ನಾಳೆಯಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ.. ಆಡಳಿತ-ಪ್ರತಿಪಕ್ಷಗಳ ತಂತ್ರ-ಪ್ರತಿತಂತ್ರ