ಬೆಂಗಳೂರು: ಕಾಂಗ್ರೆಸ್ ಎಲ್ಲ ವಿಷಯಗಳಲ್ಲೂ ಗೊಂದಲದ ಗೂಡು. ಯಾವುದರಲ್ಲೂ ಸ್ಪಷ್ಟನೆ ಇಲ್ಲ. 5 ಗ್ಯಾರಂಟಿಗಳಲ್ಲೂ ಸ್ಪಷ್ಟನೆ ಇಲ್ಲ. ಆರ್ಥಿಕ ಹೊರೆ ಬಗ್ಗೆಯೂ ಜನರಿಗೆ ತಿಳಿಸಿಲ್ಲ. ಬಸ್ಸುಗಳ ಪ್ರಯಾಣ ಅಧ್ವಾನ ಆಗಿ ಹೋಗಿದೆ. ಬಸ್ಸುಗಳ ವ್ಯವಸ್ಥೆ ಮಾಡದೆ ಫ್ರೀ ಅಂದರೆ ಏನರ್ಥ?. ಇದು ಜವಾಬ್ದಾರಿಯುತ ಸರ್ಕಾರದ ಲಕ್ಷಣ ಅಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನಾಳಿನ ಕಾಂಗ್ರೆಸ್ ಪ್ರತಿಭಟನೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಷ್ಟು ಜನ ಓಡಾಡುತ್ತಿದ್ದಾರೋ ಅದಕ್ಕೆ ಪೂರಕವಾಗಿ ಬಸ್ ಬಿಡಬೇಕು. 70 ಜನ ಓಡಾಡುವ ಕಡೆ 150 ಜನ ಓಡಾಡುತ್ತಿದ್ದಾರೆ ಎಂದು ಹೇಳಿದರು.
ಕೆಲಸ ಮಾಡೋ ವಾತಾವರಣ ಇಲ್ಲ ಅಂತ ನಿಗಮದ ಸಿಬ್ಬಂದಿ ಹೇಳುತ್ತಿದ್ದಾರೆ. ನಿಮ್ಮ ಸಂಬಳ ನೀವೇ ನೋಡಿಕೊಳ್ಳಿ ಅಂತ ಹೇಳಿದೆ. ಅಕ್ಕಿ ವಿಚಾರದಲ್ಲಿ ಕೇಂದ್ರದ ಪಾಲು 5 ಕೆಜಿ ಕೊಟ್ಟೇ ಕೊಡಲಿದೆ. ಇನ್ನು 5 ಕೆಜಿ ಹೇಗೆ ತರಬೇಕು? ದಾಸ್ತಾನು ಎಷ್ಟಿದೆ ಅಂತ ನೋಡಿಕೊಳ್ಳಬೇಕು. ಕೇಂದ್ರದ ಮೇಲೆ ಗೂಬೆ ಕೂರಿಸೋದು ಸರಿಯಲ್ಲ. ಇದು ಮಾತಿಗೆ ತಪ್ಪಿದ ಸರ್ಕಾರ. ತಮ್ಮ ವೈಫಲ್ಯ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಇವರಿಗೆ ಜನ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ. ಎಫ್ಸಿಐ ಬಳಿ ಸ್ಪಷ್ಟವಾಗಿ ಕೇಳಬೇಕಿತ್ತು. ಇವರಿಗೆ ಸರ್ಕಾರ ನಡೆಸುವ ಯೋಗ್ಯತೆ ಇಲ್ಲ. ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಮಾತು ಕೊಟ್ಟಂತೆ ನಡೆಯದಿರೋ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಹಲವಾರು ಸಚಿವರು ತಮ್ಮ ಖಾತೆಗಳ ಬಗ್ಗೆ ಹಲವಾರು ಕಾಮಗಾರಿ ನಿಲ್ಲಿಸಿದ್ದಾರೆ. ಆಸ್ಪತ್ರೆ, ಮನೆ, ಕಟ್ಟಡ ಎಲ್ಲ ನಿಲ್ಲಿಸಿದ್ದಾರೆ. ಮಳೆ ಬಂದರೆ ಅದೆಲ್ಲವೂ ಸ್ಥಗಿತ ಮಾಡಿದ್ದಾರೆ. ಗುತ್ತಿಗೆದಾರರಿಗೆ ಒಂದು ರೂ. ಕೊಟ್ಟಿಲ್ಲ. ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಕೆಂಪಣ್ಣಗೆ ಪ್ರಶ್ನೆ ಮಾಡ್ತೀನಿ? ಕಾಂಗ್ರೆಸ್ ಜೊತೆ ಸೇರಿಕೊಂಡು ಆರೋಪ ಮಾಡಿದಿರಿ. ಈಗ ನಿಮ್ಮ ಕಂಟ್ರಾಕ್ಟರ್ಗಳಿಗೆ ನ್ಯಾಯ ಕೊಡಿಸಿ ಎಂದರು.
ಸಿಎಂ ಅವಧಿ ಅಪಸ್ವರ ಎದ್ದಿದೆ. ಯಾಕೆ ಈಗ ಮಾತನಾಡುತ್ತಿದ್ದಾರೆ. ಐದು ವರ್ಷ ಸರ್ಕಾರ ಇರಲಿದೆ. ಆದರೆ ಒಳಗೊಳಗೆ ಅಪಸ್ವರ ಎದ್ದಿದೆ. ಗಟ್ಟಿ ಇರೋ ಹಲ್ಲನ್ನು ಅಲ್ಲಾಡಿಸಿ ಅಲ್ಲಾಡಿಸಿ ಬೀಳಿಸುವಂತಾಗಿದೆ. ಮುಖ್ಯಮಂತ್ರಿ ಬದಲಾವಣೆ ಅಂತ ಹೇಳಿ ಹೇಳಿ ಅವರನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ. ನನ್ನ ಪ್ರಕಾರ ಭ್ರಮನಿರಸ ಸರ್ಕಾರ ಇದ್ದರೆ, ಅದು ಕಾಂಗ್ರೆಸ್ ಸರ್ಕಾರ ಅಂತ ಹೇಳಲಿಚ್ಚಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಒಟ್ಟಿನಲ್ಲಿ ಇದು ಅತ್ಯಂತ ಬೇಜವಾಬ್ದಾರಿಯುತ ಸರ್ಕಾರ. ಸರ್ಕಾರ ನಡೆಸೋಕೆ ಇವರಿಗೆ ನಿಜವಾಗಿಯೂ ಯೋಗ್ಯತೆ ಇಲ್ಲ. ಹಾಗಾಗಿ ರಾಜಕೀಯಪ್ರೇರಿತವಾದ ಒಂದು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಅವರು ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಹೋರಾಟಕ್ಕೆ ಕ್ರಮ ವಹಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ವಿರುದ್ಧದ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ: ಕಟೀಲ್