ಬೆಂಗಳೂರು: ದೇಶದಲ್ಲಿ ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಮಹಿಳಾ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಅಡುಗೆ ಮಾಡಿ ವಿನೂತನ ಪ್ರತಿಭಟನೆ ಮಾಡಿದರು. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಪುಷ್ಪ ಅಮರನಾಥ್ ಇತರ ನಾಯಕರ ನೇತೃತ್ವದಲ್ಲಿ ನಿತ್ಯದ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ದೇಶವನ್ನು ಹರಿದು ಹಂಚಿದ್ದಾರೆ:
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಹಾಗೂ ಹಾಗೂ ಅಂಬಾನಿಗೆ ದೇಶದ ಆಸ್ತಿಯನ್ನು ಹಂಚಿದ್ದಾರೆ. ಅಂಬಾನಿ, ಅದಾನಿ ಹಿಡಿತದಲ್ಲಿರುವ ಸರ್ಕಾರದ ವಿರುದ್ಧ ನಾವಿಲ್ಲಿ ಸೇರಿದ್ದೇವೆ.
ಬಹಳ ಶಕ್ತಿಶಾಲಿ ಪ್ರಧಾನಿ ಎಂಬ ಭ್ರಮೆ ಇತ್ತು. ಆದರೆ, ಅವರು ಅಂಬಾನಿ, ಅದಾನಿಯ ಮ್ಯಾನೇಜರ್. ಮೋದಿ ಅವರು ಅಂಬಾನಿ, ಅದಾನಿ ಪರ ಪ್ರಧಾನಿಯಾಗಿದ್ದಾರೆ. ನೀವು ಅಂಬಾನಿ, ಅದಾನಿ ಪರ ಇದ್ದೀರೋ? ಅಥವಾ ಜನರ ಪರ ಇದ್ದೀರೋ ಎಂಬ ಬಗ್ಗೆ ಇಲ್ಲಿಯೇ ಗಾಂಧಿ ಪ್ರತಿಮೆ ಎದುರು ಚರ್ಚೆ ಮಾಡೋಣ ಬನ್ನಿ ಎಂದು ಬಿಜೆಪಿ ನಾಯಕರಿಗೆ ಓಪನ್ ಚಾಲೆಂಜ್ ಹಾಕಿದರು.
ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಜಾಸ್ತಿ ಆಗಿದ್ದರಿಂದ ಇಲ್ಲಿಯೂ ದರ ಏರಿಕೆ ಆಗುತ್ತಿದೆ ಅಂತಾರೆ. ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 75 ರೂಪಾಯಿ, ಆದರೆ ನಮ್ಮಲ್ಲಿ 106 ರೂಪಾಯಿ ಇದೆ. ರಾವಣ ಹಾಗೂ ರಾಮನ ರಾಜ್ಯದಲ್ಲಿ ದರ ಏರಿಕೆ ಇಳಿಕೆ ಆಗಿದೆ.
ನೇಪಾಳ, ಭೂತಾನ್ ದೇಶದವರು ನಮ್ಮಿಂದಲೇ ಪೆಟ್ರೋಲ್ ಕೊಂಡುಕೊಳ್ಳುತ್ತಾರೆ. ನಮ್ಮಿಂದ ಪಡೆದ ಅವರು ಲೀಟರ್ಗೆ 80 ರೂಪಾಯಿಗೆ ಮಾರುತ್ತಾರೆ, ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ 65 ರೂ. ಇದೆ. ಇದು ದೇಶದ್ರೋಹದ ಸರ್ಕಾರ, ಆದರೂ ಜನ ಮರಳೋ ಜಾತ್ರೆ ಮರಳೋ ಎಂಬಂತೆ ದೇಶದ ಜನತೆಯು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಮತ ಪಡೆದ ಮೇಲೆ ಅಂಬಾನಿ, ಅದಾನಿ ಮೇಲೆ ಮಾತ್ರವೇ ಮೋದಿಗೆ ಮನಸ್ಸಿದೆ ಎಂದು ಟೀಕಿಸಿದರು.
ಅಚ್ಚೆದಿನ್ ಅಲ್ಲ, ಬೂರೇ ದಿನ್:
ದೇಶವು ಇಂದು ಕಾಣುತ್ತಿರುವುದು ಅಚ್ಚೇ ದಿನ್ ಅಲ್ಲ, ಬೂರೇ ದಿನ್. ಮಹಿಳೆಯರು ಹೆಣ್ಣುಮಕ್ಕಳನ್ನ ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಅಡುಗೆ ಅನಿಲ ಬೆಲೆ ಇಳಿಸಿಲ್ಲ, ಇಂತಹ ಅಚ್ಚೇ ದಿನ್ ನಮಗೆ ಬೇಕಾಗಿಲ್ಲ. ಮಹಿಳಾ ಕಾಂಗ್ರೆಸ್ ಹೋರಾಟ ಪಂಚಾಯಿತಿ ಮಟ್ಟದವರೆಗೂ ಕೊಂಡೊಯ್ಯುತ್ತೇವೆ. ಇಂದು ಇಲ್ಲಿ ಆರಂಭವಾದ ಹೋರಾಟ ಹಳ್ಳಿಹಳ್ಳಿಯನ್ನು ತಲುಪಲಿದೆ. ಬೆಲೆ ಏರಿಕೆಯಿಂದ ಜನ ಸಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳೇ ಮಧ್ಯಪ್ರವೇಶ ಮಾಡಬೇಕು. ಮಹಿಳಾಪರ ಹಾಗೂ ಜನಪರ ದನಿ ಎತ್ತಬೇಕು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಮನವಿ ಮಾಡಿದರು.
ನಾಯಕರ ಬಂಧನ:
ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ನಂತರ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜಭವನ ಮುತ್ತಿಗೆಗೆ ಮುಂದಾದರು. ಆಗ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಬಂಧಿಸಿದರು. ಮೌರ್ಯ ವೃತ್ತದಿಂದ ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ರಾಜಭವನಕ್ಕೆ ತೆರಳುವ ಮಾರ್ಗಮಧ್ಯೆ ರೇಸ್ ಕೋರ್ಸ್ ರಸ್ತೆಯ ಹತ್ತಿರದ ಕಾಂಗ್ರೆಸ್ ಭವನದ ಮುಂಭಾಗ ಬಂಧಿಸಲಾಯಿತು.