ಬೆಂಗಳೂರು : ಟೆಂಡರ್ ಗೋಲ್‌ಮಾಲ್ ಬಗ್ಗೆ ಆಧಾರವಿಲ್ಲದೇ ಕಾಂಗ್ರೆಸ್ ಪಕ್ಷದವರು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಆಧಾರವಿಟ್ಟುಕೊಂಡು ಆರೋಪ ಮಾಡಬೇಕು. ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ. ದಾಖಲೆ ಇಟ್ಟುಕೊಂಡು ದೂರು ನೀಡಲಿ. ಹಾಗಿದ್ದರೆ ಅವರು ವಿಧಾನಸೌಧದಲ್ಲಿ ಯಾಕೆ ಮಾತನಾಡಲಿಲ್ಲ. ಹೊರಗಡೆ ಹೋಗಿ ಆರೋಪ ಮಾಡ್ತಿದ್ದಾರೆ ಅಷ್ಟೇ. ವಿಧಾನಸೌಧದಕ್ಕಿಂತ ಜಾಗ ಬೇಕಾ? ಅವರಿಗೆ. ಅವರ ಬಳಿ ಯಾವುದೇ ಆಧಾರವಿಲ್ಲ. ಎಸಿಬಿಗೋ ಅಥವಾ ಲೋಕಾಯುಕ್ತಕ್ಕಾದ್ರೂ ಹೋಗಿ ದೂರು ನೀಡಲಿ ಎಂದು ತಿಳಿಸಿದರು.
ಗೂಳಿಹಟ್ಟಿ ಶೇಖರ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗೂಳಿಹಟ್ಟಿ ಶೇಖರ್ ಬಳಿ ದಾಖಲೆ ಇದ್ದರೆ, ಅವರೂ ದೂರು ಕೊಡಬಹುದು. ಯಾಕೆ ಗಾಳಿಯಲ್ಲಿ ಗುಂಡು ಹಾರಿಸಬೇಕು?. ಯಾರನ್ನೂ ಕಟ್ಟಿ ಹಾಕಿಲ್ಲ, ದಾಖಲೆ ಇದ್ದರೆ ಹೋಗಿ ಕೊಡಲಿ. ಯಾರು ತಪ್ಪೂ ಮಾಡಿದ್ರೂ ಅವರಿಗೆ ಶಿಕ್ಷೆಯಾಗಲಿ. ಉಪ್ಪು ತಿಂದವ ನೀರು ಕುಡಿಯುತ್ತಾನೆ ಎಂದು ಹೇಳಿದರು. ಗೂಳಿಹಟ್ಟಿ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಗೂಳಿಹಟ್ಟಿ ಬಗ್ಗೆ ರಾಜ್ಯದ ಘಟಕ ಏನು ಯೋಚನೆ ಮಾಡಬೇಕು, ಅದನ್ನು ಮಾಡುತ್ತದೆ. ನೀವು ಎಲ್ಲಿಂದ ಮುಂದಕ್ಕೆ ಹೋದ್ರಿ. ಅವರ ಹತ್ತಿರ ಆಧಾರವಿದ್ದರೆ ಖಂಡಿತಾ ವಿಧಾನಸಭೆಯಲ್ಲಿ ದಾಖಲೆ ಕೊಡಲಿ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.
ದಾಖಲೆ ಕೊಟ್ಟು ತನಿಖೆಗೆ ಆಗ್ರಹಿಸಬಹುದು: 22 ಸಾವಿರ ಕೋಟಿ ನೀರಾವರಿ ಟೆಂಡರ್ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಅವರು ಸ್ವತಂತ್ರ ಇದ್ದಾರೆ. ಅವರು ಕೂಡ ವಿಧಾನಸಭೆ ಅಧಿವೇಶನದಲ್ಲಿ ದಾಖಲೆ ಕೊಟ್ಟು ತನಿಖೆಗೆ ಆಗ್ರಹಿಸಬಹುದು, ಕೊಡಲಿ ದಾಖಲೆಯನ್ನು ಎಂದು ತಿಳಿಸಿದರು. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. 500 ಕೋಟಿ ರೂ ಮೌಲ್ಯದ ಟೆಂಡರ್ ಇದ್ದರೆ ಅದರ ಅಂದಾಜು ಮೊತ್ತವನ್ನು 1000 ಕೋಟಿಯಷ್ಟು ಮಾಡಿಸಿದ್ದಾರೆ. ಟೆಂಡರ್ ಗೋಲ್‌ಮಾಲ್ ಮೂಲಕ ಸುಮಾರು 18,000 ಕೋಟಿ ರೂ. ಅವ್ಯವವಹಾರ ಆಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಇದನ್ನೂ ಓದಿ : ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ: ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಟೀಕೆ
ಈ ಸರ್ಕಾರದ ಮೇಲೆ ಏನು ಚರ್ಚೆ ಮಾಡ್ತೀರಿ?: ಇನ್ನೊಂದೆಡೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಗೂಳಿಹಟ್ಟಿ ಶೇಖರ್ ಪತ್ರದ ವಿಚಾರವಾಗಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ವಿಧಾನಸಭೆಯಲ್ಲಿ ಸಿದ್ದರಾಮಯ್ಯ ದಾಖಲೆ ಕೊಡಿ ಎಂದು ಹೇಳಿದ್ದಾರೆ. ಯಾವ ದಾಖಲೆ ಇಡೋದು?, ಕಮಿಷನ್ ಏನು ವೈಟ್ ಅಂಡ್ ವೈಟ್ ತಗೊಂಡಿದಾರಾ?, ಎಲ್ಲಾ ಬ್ಲಾಕ್ ಮನಿ ತಗೊಂಡಿರುತ್ತಾರೆ. ದಾಖಲೆ ಎಲ್ಲಿ ಇಡೋದಕ್ಕೆ ಆಗುತ್ತೆ? ಬಿಜೆಪಿ ಶಾಸಕನೇ ಟೆಂಡರ್ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಎಂದು ಚರ್ಚೆ ಮಾಡಿದ ಮೇಲೆ ಈ ಸರ್ಕಾರದ ಮೇಲೆ ಏನು ಚರ್ಚೆ ಮಾಡ್ತೀರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ: ಹೆಚ್. ಡಿ. ಕುಮಾರಸ್ವಾಮಿ