ಬೆಂಗಳೂರು: ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಧರಣಿ ಸತ್ಯಾಗ್ರಹದ ಮಧ್ಯದಲ್ಲೇ ರಾಜ್ಯಪಾಲರ ಭೇಟಿಗೆ ತೆರಳಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿಕುಮಾರ್ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ವಾಪಸ್ ಆಗಿದೆ.
ಸಭೆಗೆ ವಾಪಸ್ ಆದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮಾತನಾಡಿ, ಯಾರು ರೈತರ ಪರವಾಗಿ ಇಲ್ಲವೋ ಅವರು ಯಾರ ಪರವಾಗಿಯೂ ಇಲ್ಲ ಎನ್ನುವ ಮಾತು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನ್ವಯಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ಕಿ ಬಾತ್ ಕಾರ್ಯಕ್ರಮದಲ್ಲಿ ತಾನು ರೈತರ ಪರ ಎಂದಿದ್ದಾರೆ. ಇಂದು ಬಿ.ಎಸ್ ಯಡಿಯೂರಪ್ಪ ಕೂಡ ಅದೇ ಮಾತನ್ನು ಆಡಿದ್ದಾರೆ. ಆದರೆ ದೇಶಾದ್ಯಂತ ಇಷ್ಟು ದೊಡ್ಡ ಮಟ್ಟದಲ್ಲಿ ರೈತರು ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರೈತರು ತಮ್ಮ ನೆಲದಲ್ಲಿಯೇ ಗುಲಾಮರಾಗಿ ಬದುಕುವ ಸ್ಥಿತಿ ಬರಬಾರದು. ಅದಕ್ಕಾಗಿಯೇ ಉಳುವವನೇ ಭೂಮಿಯ ಒಡೆಯ ಕಾನೂನು ತರಲಾಗಿತ್ತು. ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಜವಾದ ರೈತರ ಆಶಯವನ್ನು ಮರೆತು ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತೇನೆ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಕೋಟ್ಯಂತರ ರೈತರ ಬದುಕಿನಲ್ಲಿ ಆಟವಾಡಲು ಹೊರಟಿದ್ದಾರೆ. ದೇಶಾದ್ಯಂತ ಎಪಿಎಂಸಿಗಳು ಬೆಂಬಲ ಬೆಲೆ ನಿಗದಿ ಪಡಿಸುವ ಕಾರ್ಯ ಮಾಡುತ್ತಿದ್ದು, ಇದನ್ನೇ ಮುಚ್ಚಿಬಿಟ್ಟರೆ ರೈತರಿಗೆ ಬದುಕು ಎಲ್ಲಿಂದ ಸಿಗಲು ಸಾಧ್ಯ? ದೇಶದ ಶೇಕಡಾ ಎಂಬತ್ತರಷ್ಟು ರೈತರು ಕನಿಷ್ಠ ಎರಡು ಎಕರೆ ಭೂಮಿಯನ್ನು ಹೊಂದಿದ್ದಾರೆ. ಇಷ್ಟು ಚಿಕ್ಕ ಪ್ರಮಾಣದ ಭೂಮಿ ಹೊಂದಿದವರು ಯಾವ ರೀತಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಿ ತಮ್ಮ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯ? ರೈತರ ಬದುಕನ್ನು ಸಂಪೂರ್ಣ ಬೀದಿಗೆ ತರುವ ಯತ್ನದಲ್ಲಿ ರಾಷ್ಟ್ರ ಹಾಗೂ ರಾಜ್ಯ ಸರ್ಕಾರ ನಿರತವಾಗಿದೆ ಎಂದು ದೂರಿದರು.
ನಾವು ರೈತರಿಂದ ಸಹಿ ಸಂಗ್ರಹ ಮಾಡುತ್ತಿದ್ದು, ಎರಡು ಕೋಟಿ ರೈತರ ಸಹಿ ಸಂಗ್ರಹ ಮಾಡಲಿದ್ದೇವೆ. ಇದನ್ನು ನಮ್ಮ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ರಾಹುಲ್ ಗಾಂಧಿಯವರ ಜೊತೆ ರಾಷ್ಟ್ರಪತಿಗಳಿಗೆ ನೀಡಲಿದ್ದೇವೆ ಎಂದರು.