ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಅನರ್ಹ ಶಾಸಕ ಸೋಮಶೇಖರ್ ವಿರುದ್ಧ ಬೆಂಗಳೂರು ನಗರ ವ್ಯಾಪ್ತಿಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಜಿ ಕೃಷ್ಣಪ್ಪ, ಮಾಜಿ ಮೇಯರ್ ಪದ್ಮಾವತಿ, ಮುಖಂಡರು, ಬಿಬಿಎಂಪಿ ಸದಸ್ಯರು ಬೇಸರ ಹೊರಹಾಕಿದ್ದಾರೆ.
ಜಿ. ಕೃಷ್ಣಪ್ಪ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿ ತಮ್ಮ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತೆಗೆದುಕೊಂಡು ಹೋದ ಸೋಮಶೇಖರ್ ಇಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಬಗ್ಗೆ ಮಾತಾಡ್ತಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದವರು. ಇಂದು ಅನರ್ಹರಾಗಿ ತ್ರಿಶಂಕು ವಾತಾವರಣದಲ್ಲಿದ್ದಾರೆ ಎಂದರು.
ಅಧ್ಯಕ್ಷರಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ದು ಸರಿಯಲ್ಲ. ದಿನೇಶ ಗುಂಡೂರಾವ್ ಜಿಲ್ಲಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನ ನಿಭಾಯಿಸಿ ಈಗ ಅಧ್ಯಕ್ಷರಾಗಿದ್ದಾರೆ. ಇಂತವರ ಬಗ್ಗೆ ಕೀಳು ಪದ ಬಳಸಿದ್ದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು.
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಕಳ್ಳನನ್ನ ಕಳ್ಳ ಅಂತಾ ಕರೆಯೋದು ತಪ್ಪಾ? ಅನರ್ಹ ಶಾಸಕರನ್ನ ಅನರ್ಹ ಅಂತಾ ಕರೆಯೋದು ತಪ್ಪಾ? ಕಾಂಗ್ರೆಸ್ ನಿಂದ ಶಾಸಕರಾದರು, ಬಿಡಿಎ ಚೇರ್ಮನ್ ಆದ್ರು. ಎಲ್ಲವನ್ನ ಅನುಭವಿಸಿ ಈಗ ಪಕ್ಷದ್ರೋಹಿಯಾಗಿದ್ದಾರೆ. ಮುಂದಿನ ದಿನದಲ್ಲಿ ಸೋಮಶೇಖರ್ಗೆ ತಕ್ಕ ಪಾಠ ಕಲಿಸ್ತೇವೆ ಬಿಡಲ್ಲ ಎಂದರು. ಮಹಾಪೌರರ ಚುನಾವಣೆಯನ್ನ ಮುಂದಕ್ಕೆ ಹಾಕುವ ಯತ್ನ ನಡೆದಿದೆ. ಬಿಬಿಎಂಪಿ ವಿವಿಧ ಯೋಜನೆಗಳ ಅನುದಾನವನ್ನ ಕಡಿತ ಮಾಡಿದ್ದು ಸರಿಯಲ್ಲ. 1200 ಕೋಟಿ ವೈಟ್ ಟ್ಯಾಪಿಂಗ್ ಹಣವನ್ನ ತೆಗೆದು ಅನರ್ಹ ಶಾಸಕರಿಗೆ ನೀಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಎಸ್ ಟಿ ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಅಸಂವಿಧಾನಿಕ ಪದ ಬಳಸಿದ್ದು ಸರಿಯಲ್ಲ. ಮೊದಲು ತಾವು ಯಾವ ಸ್ಥಿತಿಯಲ್ಲಿದ್ದೀರಿ ಅನ್ನೋದನ್ನ ನೋಡ್ಕೊಂಡು ಮಾತಾಡಿ. ಕಾಂಗ್ರೆಸ್ ಅವರಿಗೆ 5 ಬಾರಿ ಟಿಕೆಟ್ ನೀಡಿತ್ತು. ಸಿದ್ದರಾಮಯ್ಯರ ಆಶೀರ್ವಾದದಿಂದ ಎರಡನೇ ಬಾರಿ ಶಾಸಕರಾಗಿದ್ದಾರೆ. ಈಗ ಅವರೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡ್ತಿದ್ದಾರೆ. ಇದು ಸೋಮಶೇಖರ್ ಹಿರಿತನಕ್ಕೆ ಶೋಭೆ ತರಲ್ಲವೆಂದು ವಾಗ್ದಾಳಿ ನಡೆಸಿದರು.