ಬೆಂಗಳೂರು : ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಿರುವ ಕಾಂಗ್ರೆಸ್ ನಾಳೆ ಮಹತ್ವದ ಸಭೆ ಹಮ್ಮಿಕೊಂಡಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಾಳೆ ಬೆಳಗ್ಗೆ 10.30 ಸಭೆ ನಡೆಯಲಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ 13 ಕ್ಷೇತ್ರಗಳ ನಾಯಕರ ಅಭಿಪ್ರಾಯ ಸಂಗ್ರಹಿಸಿರುವ ಕೈ ಮುಖಂಡರು, ನಿನ್ನೆ ಬೆಳಗಾವಿಯಲ್ಲಿ ಇತರ ಮೂರು ಕ್ಷೇತ್ರಗಳ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. ಇಂದು ಸಂಜೆ ನಗರಕ್ಕೆ ಆಗಮಿಸಿದ ಕೆ.ಸಿ ವೇಣುಗೋಪಾಲ್ ನೇರವಾಗಿ ಅರಮನೆ ರಸ್ತೆಯ ಖಾಸಗಿ ಹೋಟೆಲ್ಗೆ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾತ್ರಿ ಅವರನ್ನು ಭೇಟಿ ಮಾಡಿ ಔಪಚಾರಿಕ ಸಭೆ ನಡೆಸಿದರು.
ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಹೆಚ್ ಕೆ ಪಾಟೀಲ್, ಬಸವರಾಜ ರಾಯರೆಡ್ಡಿ, ಕೃಷ್ಣ ಬೈರೇಗೌಡ, ಸಲೀಂ ಅಹಮದ್, ಮತ್ತಿತರ ನಾಯಕರು ಆಗಮಿಸಿದ್ದಾರೆ. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಇದುವರೆಗೂ ಆಗಮಿಸಿಲ್ಲ. ಇವರ ಅನುಪಸ್ಥಿತಿ ಸಹಜವಾಗಿ ಅಚ್ಚರಿ ಮೂಡಿಸಿದ್ದು, ಇಂದು ಬೆಳಗ್ಗೆ ನಡೆದ ಕೆಪಿಸಿಸಿ ಕಚೇರಿ ಸಭೆಯಲ್ಲಿ ಕೂಡ ಇವರು ಗೈರಾಗಿದ್ದರು.
ಅಚ್ಚರಿ ಮೂಡಿಸಿದ ಮಾಜಿ ಸಂಸದ : ಮಂಡ್ಯ ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಎಲ್.ಆರ್ ಶಿವರಾಮೇಗೌಡ ಕಾಂಗ್ರೆಸ್ ನಾಯಕರು ಹೋಟೆಲ್ನಲ್ಲಿ ಇದ್ದ ಸಂದರ್ಭದಲ್ಲಿ ಆಗಮಿಸಿ ಅಚ್ಚರಿ ಮೂಡಿಸಿದರು. ಅನ್ಯ ಕಾರಣದ ನಿಮಿತ್ತ ಹೋಟೆಲ್ಗೆ ಬಂದಿದ್ದಾಗಿ ಅವರು ಹೇಳಿದರು. ಆದರೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಈಗಾಗಲೇ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಸಂಪರ್ಕ ಮಾಡುತ್ತಿದ್ದು, ಇದೇ ಸಂದರ್ಭ ಶಿವರಾಮೇಗೌಡ ಭೇಟಿ ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಗಮನ ಸೆಳೆದ ಟಿಕೆಟ್ ಆಕಾಂಕ್ಷಿ : ಶಿವಾಜಿನಗರ ಟಿಕೆಟ್ ಆಕಾಂಕ್ಷಿಯಾಗಿರುವ ರೂಮಾನ್ ಶರೀಫ್ ಖಾಸಗಿ ಹೋಟೆಲ್ ನಲ್ಲಿ ಕಾಣಿಸಿಕೊಂಡರು. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಹುತೇಕ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪಾಲಾಗುವ ಸಾಧ್ಯತೆ ಇದ್ದು, ಈ ಸಂದರ್ಭ ತಮ್ಮ ನಿಟ್ಟಿನ ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಅವರು ಹೋಟೆಲ್ ಗೆ ಭೇಟಿ ನೀಡಿದ್ದಾರೆ. ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರೊಂದಿಗೆ ಆಗಮಿಸಿದರು. ಯಶವಂತಪುರ ಕ್ಷೇತ್ರದಿಂದ ಬಾಲಕೃಷ್ಣ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು ಇವರ ಪರ ಲಾಬಿ ನಡೆಸಲು ಆಗಮಿಸಿರಬಹುದು ಎಂದು ಹೇಳಲಾಗುತ್ತಿದೆ.