ಬೆಂಗಳೂರು: ಅನಗತ್ಯವಾಗಿ ಹಿಜಾಬ್ ವಿಚಾರವನ್ನ ಬಿಜೆಪಿಯವರು ಸಮಸ್ಯೆ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಲ್ಪಸಂಖ್ಯಾತರು ಶಿಕ್ಷಣದಲ್ಲಿ ತುಂಬಾ ಹಿಂದೆ ಇದ್ರು. ಇತ್ತೀಚೆಗೆ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಸಂಘ ಪರಿವಾರದವರು ಅವರನ್ನ ಶಿಕ್ಷಣದ ವಂಚಿತರನ್ನಾಗಿ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಹಿಜಾಬ್ ವಿವಾದ ಹುಟ್ಟಿಹಾಕಿದ್ದೇ ಸಂಘ ಪರಿವಾರದವರು ಎಂದು ಕಿಡಿಕಾರಿದರು.
ಬಹಳ ಕಾಲದಿಂದ ಹಿಜಾಬ್ ವ್ಯವಸ್ಥೆ ನಡೆದುಕೊಂಡು ಬಂದಿದೆ. ಕೋರ್ಟ್ ಕೂಡ ಇದನ್ನ ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲ ಧರ್ಮ ಸಂಪ್ರದಾಯ ಪ್ರಕಾರ ಮಾಡ್ಕೊಂಡು ಬರ್ತಾಯಿದ್ದಾರೆ. ಧರ್ಮ ಆಚರಣೆಗೆ ಸಂವಿಧಾನ ಹಕ್ಕು ನೀಡಿದೆ. ಇದು ಸಂವಿಧಾನದ ಹಕ್ಕು ಕೂಡ. ಇದಕ್ಕೆ ಯಾರೂ ಅಡ್ಡಿ ಮಾಡಬಾರದು. ಇದನ್ನ ಈಗ ವಿವಾದ ಮಾಡಲಾಗಿದೆ ಎಂದರು.
ಕೋರ್ಟ್ ಆದೇಶ ಪಾಲಿಸ್ತೇವಿ- ಸಿಎಂ: ಅಶ್ವತ್ಥ ನಾರಾಯಣ್ ಅವರು ಡಿಗ್ರಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಅಪ್ಲೈ ಆಗಲ್ಲ ಅಂತ ಹೇಳಿದ್ದಾರೆ. ಸಿಎಂ ಕಾನೂನು ಆದೇಶದ ಪ್ರಕಾರ ನಡೆದುಕೊಳ್ತೇವೆ ಎಂದಿದ್ದಾರೆ. ಆದರೆ, ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿ ಮಣಿವಣ್ಣನ್ ಇದಕ್ಕೆ ವಿರುದ್ಧದ ಆದೇಶ ಮಾಡಿದ್ದಾರೆ ಎಂದು ದೂರಿದರು.
ವಿವಾದ ಆದ ಮೇಲೆ ಕೋರ್ಟ್ ಮಧ್ಯಂತರ ಆದೇಶ ಆಗಿದೆ. ವಿ ಮೇಕ್ ಇಟ್ ಕ್ಲಿಯರ್, ದಿಸ್ ಆರ್ಡರ್ ಸಚ್ ಆಫ್ ದಿ ಇನ್ಸ್ಟಿಟ್ಯೂಷನ್ ಕಾಲೇಜು ಡೆವೆಲಪ್ ಮೆಂಟ್ ಕಮಿಟಿ ಪ್ರಿಸ್ಕ್ರೈಬ್ಡ್ ಅಂತಾ ಇದೆ. ಎಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಇದೆಯೋ ಅಲ್ಲಿ ಮಾತ್ರ ಅಂತಾ ಇದೆ. ಎಲ್ಲರಿಗೂ ಅಲ್ಲ ಎಂದು ಕೋರ್ಟ್ ಆದೇಶ ಉಲ್ಲೇಖಿಸಿದರು.
ಹಿಜಾಬ್ ವಿಚಾರದಲ್ಲಿ ಯಾವುದೇ ಧರ್ಮದ ಮೂಲಭೂತವಾದಿಗಳು ಜನರ ಹಾದಿ ತಪ್ಪಿಸುವ ಕಾರ್ಯ ಮಾಡುವುದನ್ನು ಖಂಡಿಸುತ್ತೇನೆ. ಸಂವಿಧಾನದ ವಿರುದ್ಧ ತೀರ್ಮಾನ ಮಾಡಿದರೆ ದೇಶದ್ರೋಹ ಆದಂತೆ. ನಾನು ಸರ್ಕಾರವನ್ನು ಆಗ್ರಹಿಸುತ್ತೇನೆ, ಈ ಆದೇಶ ಕೂಡಲೇ ವಾಪಸ್ ಪಡೆಯಬೇಕು. ಹೆಣ್ಣುಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದು. ಸರ್ಕಾರದ ಮಟ್ಟದಲ್ಲೇ ಮಾತುಕತೆ ಆಗಿ ಆದೇಶ ಕೈಬಿಡಬೇಕಿತ್ತು. ನ್ಯಾಯಾಲಯದ ಮೆಟ್ಟಿಲು ಏರುವ ಮಟ್ಟಕ್ಕೆ ಬೆಳೆಸಬಾರದಿತ್ತು ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿ: ಹಿಜಾಬ್ ಹಾಕಿಸೋಕೆ, ತೆಗೆಸೋಕೆ ಬಂದವರನ್ನ ಒದ್ದು ಒಳಗೆ ಹಾಕಿ.. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕಿದೆ- ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶದಲ್ಲಿ ಮಕ್ಕಳಿಗೆ ಶಿಕ್ಷಣದಲ್ಲಿ ಉಚಿತ ಹಾಗೂ ಕಡ್ಡಾಯ ಹಕ್ಕಿದೆ. ಎಲ್ಲಾ ಧರ್ಮದಲ್ಲೂ ಅವಕಾಶ ಇದೆ. ಸಮವಸ್ತ್ರ ವಿಚಾರದಲ್ಲಿ ಇಲ್ಲಿವರೆಗೂ ಯಾವುದೇ ನಿರ್ಬಂಧ ಇರಲಿಲ್ಲ. ಫೆ.5 ರವರೆಗೂ ಯಾವುದೇ ನಿರ್ಬಂಧ ಇರಲಿಲ್ಲ. ಆಮೇಲೆ ಆದೇಶ ಬಂದು ಸಮಸ್ಯೆ ಸೃಷ್ಟಿಯಾಗಿದೆ. ಒಂದು ಸ್ಕಾರ್ಫ್ ಧರಿಸುವುದನ್ನು ನಿರ್ಬಂಧಿಸುವುದು ಸರಿಯಲ್ಲ. ಮೂಲಭೂತ ಹಕ್ಕಿಗೆ ತೊಂದರೆ ಬಂದಿದೆ ಎಂದು ಹೇಳಿದರು.
ಹೊಸ ಸೃಷ್ಟಿ ಏನಾದರೂ, ಯಾರಾದರೂ ಮಾಡಿಕೊಂಡರೆ ಅದನ್ನು ವಿರೋಧಿಸಬಹುದು. ಆದರೆ, ಹಳೆಯ ಪದ್ಧತಿ ಬದಲಿಸುವುದು ಸರಿಯಲ್ಲ. ಅವರವರ ಧರ್ಮದಲ್ಲಿ ಒಂದೊಂದು ಉಡುಗೆಯ ಬಳಕೆ ಇರುತ್ತದೆ. ಇದನ್ನು ಬದಲಿಸುವಂತಿಲ್ಲ. ರಾಜ್ಯದ ಹೆಸರು ರಾಷ್ಟ್ರ ಮಟ್ಟದಲ್ಲಿ ಹಾಳಾಗುತ್ತಿದೆ. ಶಾಂತಿಗೆ ಧಕ್ಕೆ ಬರುತ್ತಿದೆ. ಮುಂದೆ ಇಲ್ಲಿಗೆ ಹೂಡಿಕೆದಾರರು ಬರುವುದಿಲ್ಲ. ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಕಾಂಗ್ರೆಸ್ ಆರಂಭಿಸಿತ್ತು. ದೇಶದ ಐಕ್ಯತೆ, ಶಾಂತಿ, ಸಮಗ್ರತೆಗೆ ಹೋರಾಡಬೇಕಿದೆ. ಆದೇಶ ವಾಪಸ್ ಪಡೆಯಲೇ ಬೇಕು. ಹಿಂದೆ ಇದ್ದಂತೆ ವ್ಯವಸ್ಥೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಕೋರ್ಟ್ ಆದೇಶ ಏನೇ ಬಂದರೂ ಪಾಲಿಸೋಣ. ಆದರೆ, ಈಗ ಸರ್ಕಾರ ಕೋರ್ಟ್ ಆದೇಶವನ್ನೇ ತಿರುಚುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.