ಬೆಂಗಳೂರು : ಕೋವಿಡ್ ಸಾವಿನ ಸಂಖ್ಯೆಯನ್ನು ತಾಂತ್ರಿಕವಾಗಿ ಮುಚ್ಚಿ ಹಾಕುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯವಸ್ಥಿತವಾಗಿ ಮಾಡಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಕೇವಲ 7 ತಿಂಗಳಲ್ಲಿ ಇಷ್ಟು ಜನ ಸತ್ತಿದ್ದೇಕೆ? ಈ ವರ್ಷದಲ್ಲೇ 1.63 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೇವಲ 7 ತಿಂಗಳಲ್ಲಿ ಇಷ್ಟು ಜನ ಸಾವು ಹೇಗೆ? ಬೇರೆ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋವಿನಿಂದಾಗಿ ಸಾವನ್ನಪ್ಪಿದ್ದಾರೆ. ಅದನ್ನು ಕೋವಿಡ್ ಸಾವು ಎಂದು ಪರಿಗಣಿಸುತ್ತಿಲ್ಲ. ಇನ್ನೆಲ್ಲ ವಿವಿಧ ರೋಗಗಳಿಂದ ಬಳಲುತ್ತಿದ್ದ ಅವರ ಸಾವನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.
ಯಾವುದೇ ರೋಗ ಲಕ್ಷಣ ವಿಲ್ಲದೆ ಚಿಕಿತ್ಸೆ ಕೊರತೆಯಿಂದಾಗಿ ಸತ್ತವರನ್ನ ಮಾತ್ರ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಸಾವು ಕೇವಲ 30 ಸಾವಿರ ಎಂದು ತಿಳಿಸಲಾಗಿದೆ. ಆದರೆ, ಅಸಲಿಯಾಗಿ ಸಾವನ್ನಪ್ಪಿದವರ ಸಂಖ್ಯೆ, ನಾವು ನೀಡಿದ ದಾಖಲೆಯಲ್ಲಿದೆ. ಲಕ್ಷಾಂತರ ಮಂದಿ ಸಾವನ್ನಪ್ಪಿದಾರೆ. ಆದರೆ, ಕಾರಣ ನೀಡಿ ಸರ್ಕಾರ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದೆ.
ಈ ಮೂಲಕ ಪರಿಹಾರ ನೀಡುವುದು ಉಳಿಸಿಕೊಳ್ಳುವ ಜೊತೆಗೆ ಸಾವಿನ ವಿಷಯದಲ್ಲಿ ತನಗೂ ಅಪಮಾನವನ್ನು ಮುಚ್ಚಿಡುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದೇ ಪ್ರಯತ್ನವನ್ನು ಕೇಂದ್ರ ಸರ್ಕಾರ ಸಹ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರ ಸತ್ತವರ ಸಂಖ್ಯೆ ಮುಚ್ಚಿಡುತ್ತಿದೆ. 2018ರಲ್ಲಿ ಸತ್ತವರು 4,83,718, 2019ರಲ್ಲಿ ಸತ್ತವರು 5,08,584, 2020 ರಲ್ಲಿ 5,51,808, 2020 ರಲ್ಲಿ ಕೇವಲ 7 ತಿಂಗಳಲ್ಲಿ ಸತ್ತವರು 4.26 ಲಕ್ಷ. ಅಂದರೆ ಸರ್ಕಾರ ಸಂಪೂರ್ಣ ಸುಳ್ಳು ಹೇಳಿದೆ ಎಂದು ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ತಪ್ಪುಗಳಿಗೆ ನೇರವಾಗಿ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ಇದರ ಜೊತೆ ರಾಜ್ಯ ಸರ್ಕಾರ ಕೂಡ ಅಂಕಿ-ಅಂಶ ಮತ್ತು ದಾಖಲೆಯನ್ನ ಮುಚ್ಚಿಡುವ ಪ್ರಯತ್ನ ಮಾಡಿದೆ. ನಾವು ಸದನದಲ್ಲಿ ಸಹ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಕೂಲಂಕಷ ಚರ್ಚೆಗೆ ಮನವಿ ಮಾಡುತ್ತೇವೆ ಎಂದರು.
ಲೆಕ್ಕಪತ್ರ ಸಮಿತಿಗೂ ಸರಿಯಾದ ಉತ್ತರ ಕೊಡ್ತಿಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತೇವೆ. ಸಾವಿನ ವಿಚಾರದಲ್ಲೂ ಮುಚ್ಚಿ ಹಾಕುತ್ತಿದೆ. ಇಡೀ ದೇಶದಲ್ಲೇ ಈ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇರುವ ಸತ್ಯವನ್ನ ಬಹಿರಂಗ ಪಡಿಸಬೇಕಲ್ಲ ಎಂದರು.