ಬೆಂಗಳೂರು : ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಕೃಷಿ ಯಂತ್ರೋಪಕರಣಗಳ ಖರೀದಿ ಹಂಚಿಕೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ ಭ್ರಷ್ಟ ಮುಕ್ತ ಕರ್ನಾಟಕ (ಎಸಿಎಫ್) ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಕೃಷಿ ಸಚಿವ ಬಿ ಸಿ ಪಾಟೀಲ್ ಹಾಗೂ ಹೆಚ್ಚುವರಿ ಕೃಷಿ ನಿರ್ದೇಶಕ ಎಂ ಎಸ್ ದಿವಾಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಎನ್ ಕೃಷ್ಣಮೂರ್ತಿ ಈ ಬಗ್ಗೆ ದೂರು ನೀಡಿದ್ದಾರೆ.
ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಸ್ಪ್ರಿಂಕ್ಲರ್, ಡೀಸೆಲ್ ಪಂಪ್ಸೆಟ್, ಪವರ್ ಸ್ಪ್ರೇಯರ್, ಬ್ಯಾಟರಿಚಾಲಿತ ಬ್ಯಾಕ್ ಸ್ಪ್ರೇಯರ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ರೈತರಿಗೆ ಸಬ್ಸಿಡಿ ದರದಲ್ಲಿ ಕೊಡಲಾಗುತ್ತದೆ. ಈ ಖರೀದಿ ಹಾಗೂ ಹಂಚಿಕೆಯಲ್ಲಿ ಭಾರಿ ಮಟ್ಟದ ಭ್ರಷ್ಟಾಚಾರ ನಡೆದಿದೆ.
ಯಂತ್ರೋಪಕರಣ ಕಂಪನಿಗಳ ಜತೆ ಶಾಮೀಲಾಗಿ ಸಚಿವ ಪಾಟೀಲ್ ತಮ್ಮ ಆಪ್ತ ಅಧಿಕಾರಿ ಹೆಚ್ಚುವರಿ ಕೃಷಿ ನಿರ್ದೇಶಕ ದಿವಾಕರ್ ಮೂಲಕ ₹210 ಕೋಟಿಗೂ ಅಧಿಕ ಮೊತ್ತದ ಕಿಕ್ಬ್ಯಾಕ್ ಪಡೆದ್ದಿದ್ದಾರೆ ಎಂದು ದೂರಿನಲ್ಲಿ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನು ಪಡೆಯದೆಯೇ ಯಂತ್ರೋಪಕರಣ ಪೂರೈಕೆ ಆಗಿದೆ ಎಂದು ಡಿಸಿ ಬಿಲ್ ಮಾಡಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ ಎನ್ನಲಾಗಿದೆ. ಇಲಾಖೆಯು ಕೃಷಿ ಯಂತ್ರೋಪಕರಣ ಖರೀದಿ ಮಾಡಿರುವ ಹಲವು ಕಂಪನಿಗಳು ಪ್ರಭಾವಿಗಳ ಬೇನಾಮಿ ಕಂಪನಿಗಳು ಎನ್ನುವ ಅನುಮಾನವಿದೆ. ಸಚಿವರ ಸೂಚನೆಯಂತೆಯೇ ನಡೆದಿರುವ ಹಗರಣ ಎಂದು ಇಲಾಖೆ ಮಾತನಾಡುತ್ತಿದೆ.
ಟೆಂಡರ್ಗಳಲ್ಲಿ ಭಾಗವಹಿಸುವ ಸಂಸ್ಥೆಗಳ ಜತೆ ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದ ಕಂಪನಿಗಳಿಗೆ ಟೆಂಡರ್ ಕೊಡುತ್ತಾರೆ. ಕೃಷಿ ಸಾಮಗ್ರಿಗಳ ವಿತರಣೆಯಲ್ಲಿ ಯಾವುದೇ ಕಂಪನಿಗಳು ರೈತರಿಗೆ ಶೇ.50ರಷ್ಟು ಸಾಮಗ್ರಿಗಳನ್ನು ಪೂರೈಕೆ ಮಾಡಿಯೇ ಇಲ್ಲ. ಬೇನಾಮಿ ಕಂಪನಿಗಳಾದ ಕಾರಣ ಈ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.