ಬೆಂಗಳೂರು: ಕೊರೊನಾ ಆರ್ಭಟಕ್ಕೆ ನಗರದ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವರು ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರೆ, ಇನ್ನೂ ಕೆಲವರು ಬೆಡ್ ಸಿಗದೆ ಚಿಕಿತ್ಸೆಯೂ ಪಡೆಯಲಾಗದೆ ಕೊನೆಯುಸಿರೆಳೆಯುತ್ತಿದ್ದಾರೆ. ಹೀಗಿರುವಾಗ ಬಿಬಿಎಂಪಿ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಬೆಡ್ ವಾರ್ ನಡೆಯುತ್ತಿದ್ದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಅತ್ತ ಕಡೆ ಖಾಸಗಿ ಆಸ್ಪತ್ರೆಗಳು ಬೆಡ್ ಕೊಡುತ್ತಿಲ್ಲ, ಇತ್ತ ಬಿಬಿಎಂಪಿ ಬಿಡುತ್ತಿಲ್ಲ. ಈ ಮೂಲಕ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಖಾಸಗಿ ಆಸ್ಪತ್ರೆಗಳು ಕಳ್ಳಾಟ ಆಡುತ್ತಿವೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಬಿಬಿಎಂಪಿಗೆ ಬೇಕಾಗಿರುವುದು ಇನ್ನೂ 2,000 ಬೆಡ್‌ಗಳು. ಆದರೆ, ಬಿಬಿಎಂಪಿ ಖಾಸಗಿ ಆಸ್ಪತ್ರೆಗಳಿಂದ 11 ಸಾವಿರ ಬೆಡ್‌ಗಳನ್ನು ಪಡೆಯಲು ಮುಂದಾಗಿತ್ತು. ಹೀಗಾಗಿ, ಶೇ. 50ರಷ್ಟು ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕೆಂದು ಸರ್ಕಾರ ಆದೇಶಿಸಿತ್ತು. ಆದರೆ, ಕೆಲ ಖಾಸಗಿ ಆಸ್ಪತ್ರೆಗಳು ಇನ್ನೂ ಶೇ. 50ರಷ್ಟು ಬೆಡ್‌ಗಳನ್ನು ಮೀಸಲಿಟ್ಟಿಲ್ಲ. ಈ ನಡುವೆ ಸರ್ಕಾರದಿಂದ ಮತ್ತೊಂದು ಆದೇಶ ಹೊರಬಿದ್ದಿದ್ದು, ಶೇ. 75ರಷ್ಟು ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡುವಂತೆ ಸೂಚಿಸಿದೆ.
ಹೊಸ ಆದೇಶ ಬಂದರೂ ಕೆಲ ಖಾಸಗಿ ಅಸ್ಪತ್ರೆಗಳು ಸರ್ಕಾರಿ ಕೋಟಾದಲ್ಲಿ ಬೆಡ್ ನೀಡದೆ ರೋಗಿಗಳಿಂದ ಲಕ್ಷ ಲಕ್ಷ ಹಣ ಪೀಕುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಶೇ. 50ರಲ್ಲಿ 2 ಸಾವಿರ ಬೆಡ್‌ಗಳನ್ನು ಕೂಡ ಖಾಸಗಿ ಆಸ್ಪತ್ರೆಗಳು ನೀಡಿಲ್ಲ. ಶೇ. 75 ಅಂದರೆ, ಹೆಚ್ಚುವರಿ 3 ಸಾವಿರ ಬೆಡ್‌ಗಳನ್ನು ಖಾಸಗಿ ಆಸ್ಪತ್ರೆಗಳು ಒದಗಿಸಬೇಕು. ಇನ್ನು, ಬೆಡ್ ನೀಡದಿರಲು ಬಿಬಿಎಂಪಿಯೇ ಕಾರಣ ಎಂದು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ. ಕಳೆದ ಬಾರಿಯ ಬಿಲ್‌ಗಳನ್ನೇ ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಜೊತೆಗೆ ಸರ್ಕಾರ ಆಕ್ಸಿಜನ್, ರೆಮ್ಡೆಸಿವಿರ್ ಪೂರೈಕೆ ಮಾಡುತ್ತಿಲ್ಲ. ಈ ಕಾರಣಕ್ಕೆ ನಾವು ಬೆಡ್ ನೀಡುತ್ತಿಲ್ಲ ಎಂಬುವುದು ಖಾಸಗಿ ಆಸ್ಪತ್ರೆಗಳ ವಾದವಾಗಿದೆ.
ಓದಿ : 'ಕೊರೊನಾ ತಡೆಗೆ ಸ್ವಲ್ಪ ತ್ಯಾಗ ಅಗತ್ಯ, ಕಠಿಣ ಮಾರ್ಗಸೂಚಿಗೆ ಜನ ಸಹಕರಿಸಬೇಕು'
ಈ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾತನಾಡಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗ ಬೆಡ್ ಸಮಸ್ಯೆ ಸರಿಯಾಗಿದೆ. ಸುಮಾರು 10 ಸಾವಿರಕ್ಕಿಂತಲೂ ಅಧಿಕ ಬೆಡ್‌ಗಳು ನಮ್ಮಲ್ಲಿ ಬಂದಿವೆ. ಈ ಬಗ್ಗೆ ನಮ್ಮ ಹೆಲ್ಪ್ ಲೈನ್ ಮೂಲಕ ಮಾಹಿತಿ ಪಡೆಯಿರಿ. ಐಸಿಯು ವೆಂಟಿಲೇಟರ್ಗಳಿಗೆ ಸಮಸ್ಯೆಯಾರುವುದು ನಮ್ಮ ಗಮನಕ್ಕೆ ಬಂದಿದೆ. ಸರ್ಕಾರದ ಮಟ್ಟದಲ್ಲಿ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಐಸಿಯು ಬೆಡ್ಗಳ ಹೊಸ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಸರ್ಕಾರ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆಯನ್ನೂ ನೀಡಿದೆ. ಇನ್ನುಳಿದಂತೆ ಸಾಮಾನ್ಯ ಬೆಡ್‌ಗಳು ಮತ್ತು ಆಕ್ಸಿಜನ್ ಬೆಡ್ಗಳ ಲಭ್ಯತೆ ನಮ್ಮಲ್ಲಿ ಇದೆ. ಕಂಟ್ರೋಲ್ ರೂಮ್ ಮೂಲಕ ಬೆಡ್ ಒದಗಿಸಲು ವಿಕೇಂದ್ರೀಕರಣ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯ 8 ವಾರ್ ರೂಮ್ಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.