ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದಲ್ಲಿ, ನಾಣ್ಯ ಮತ್ತು ಅಂಚೆ ಚೀಟಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ನಿವೃತ್ತ ಇಂಜಿನಿಯರ್ ಆದ ರಾಮರಾವ್ 7 ದಶಕಗಳಿಂದ ಸ್ವತಃ ತಾವೇ ಸಂಗ್ರಹಿಸಿರುವ 1700 ನಾಣ್ಯಗಳ ಪ್ರದರ್ಶನವನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಆರ್ ವೇಣುಗೋಪಾಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಕುಲಸಚಿವ ಪ್ರೊ.ಬಿ.ಕೆ ರವಿ ಮತ್ತು ಮೌಲ್ಯಮಾಪನ ಕುಲಸಚಿವ ಪ್ರೊ.ಶಿವರಾಜು ಭಾಗವಹಿಸಿದರು.
ಈ ಪ್ರದರ್ಶನದಲ್ಲಿ ಪ್ರಾಚೀನ ಕಾಲದ ಕವಡೆಗಳು, ಟೆರಾಕೋಟಾ ನಾಣ್ಯಗಳು, ಐತಿಹಾಸಿಕ ಕಾಲದ, ಮಹಾ ಜಾನಪದ ಕಾಲದ ಪಂಚಲಾ, ಕೋಸಲಾ, ಮಗಧ, ಆವಂತಿ, ಅಸ್ಮಕ ಇತ್ಯಾದಿ ಗಣರಾಜ್ಯಗಳನ್ನು ಹಾಗೂ ಇಂಡೋಗ್ರೀಕ್, ಮೌರ್ಯ, ಶೃಂಗ, ಶಾತವಾಹನ, ಕುಶಾನರು ಹಾಗೂ ಡೆಲ್ಲಿ ಸುಲ್ತಾನ, ಮೊಘಲ್ ಸಾಮ್ರಾಟರಾದ ಹುಮಾಯುನ್, ಅಕ್ಬರ್, ಜಹಾಂಗೀರ್, ಷಹಜಹನ್ ಮತ್ತು ಔರಂಗಜೇಬನ ನಾಣ್ಯಗಳು ಹೆಚ್ಚು ಸಂಗ್ರಹಣೆಯಾಗಿವೆ.
ದಕ್ಷಿಣ ಭಾರತದ ಚೋಳ, ಚೇರ, ವಿಜಯನಗರ, ಬಹುಮನಿ, ಮಧುರೈ ನಾಯಕರು, ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳು, ದೇಶಿಯ ಸಂಸ್ಥಾನಗಳಾದ ಮೈಸೂರು, ತಿರುವಂಕೂರ್, ಹೈದರಬಾದ್, ಕಚ್, ಬರೋಡ, ಖೋಟಾ, ಇಂಡೋರ್, ಬಿಕಾನರ್, ಇನ್ನಿತರ ಸಂಸ್ಥಾನಗಳ ನಾಣ್ಯಗಳನ್ನು ಪ್ರದರ್ಶಿಸಲಾಯಿತು.
ಮೈಸೂರು ಸಂಸ್ಥಾನದ ಒಡೆಯರು, ಹೈದರಾಲಿ, ಟಿಪ್ಪುಸುಲ್ತಾನ್ ಕಾಲದ ನಾಣ್ಯಗಳು ಆಕರ್ಷಣೀಯವಾಗಿದ್ದವು. ಅಂಚೆ ಚೀಟಿಗಳನ್ನು ಆರಂಭಿಕ ಕಾಲದಿಂದ ಪ್ರಸ್ತುತ ಕಾಲದವರಿಗೂ ಪ್ರದರ್ಶಿಸಲಾಯಿತು. ವಿಷಯಾಧಾರಿತ ಅಂಚೆ ಚೀಟಿಗಳಾದ ಜೋಡಿಯಾಕ್ ಸೈನ್ಸ್ & ಫರ್ ಆಫ್ ಇಂಡಿಯಾ, ಫೆಸ್ಟಿವಲ್ಸ್ ಆಫ್ ಇಂಡಿಯಾ, ಸಿಂಗರ್ ಆಫ್ ಇಂಡಿಯಾ ಮತ್ತು ಸಮಾಜ ಸುಧಾರಕರ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಯಿತು.
ವಿಶ್ವದ ಸುಮಾರು 110 ದೇಶಗಳ ವಿವಿಧ ನೋಟುಗಳನ್ನು ಪ್ರದರ್ಶನ ಸಹ ಇತ್ತು. ನಾಣ್ಯಗಳು ರಾಜಕೀಯ, ಆರ್ಥಿಕ, ಭೌಗೋಳಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಪ್ರತಿಬಿಂಬಿಸುತ್ತವೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಹಾಗೂ ಸಾರ್ವಜನಿಕರು ಪ್ರದರ್ಶನದ ಸದುಪಯೋಗವನ್ನು ಪಡೆದುಕೊಂಡರು.