ಬೆಂಗಳೂರು: ಜನಿಸುವಾಗಲೇ ಕಿವುಡತನವಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಬೆಳಕು ನೀಡುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ಬಾಲ ವಿಕಾಸ ಕಾರ್ಯಕ್ರಮವು ಅನುದಾನದ ಕೊರತೆಯಿಂದಾಗಿ ಸೇವೆಯನ್ನು ಸ್ಥಗಿತಗೊಂಡಿದೆ.
ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆಗೆ ಕನಿಷ್ಟ 7 ರಿಂದ 15 ಲಕ್ಷ ರೂ ಖರ್ಚಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಬಡವರಿಗಾಗಿ ರಾಷ್ಟ್ರೀಯ ಬಾಲ ವಿಕಾಸ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಪ್ರತಿ ವರ್ಷ ಅಂದಾಜು 50 ಮಕ್ಕಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು.
ಶ್ರವಣ ದೋಷ ನಿವಾರಣೆಗೆ ಕಾಕ್ಲಿಯರ್ ಇಂಪ್ಲಾಂಟ್ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸುವ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಳೆದ ಡಿಸೆಂಬರ್‌ನಿಂದ ಯೋಜನೆ ಸ್ಥಗಿತವಾಗಿದೆ. ಈವರೆಗೆ 46 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆದರೆ ನೋಂದಣಿಯಾಗಿದ್ದ 200ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ, 5 ವರ್ಷ ತುಂಬುವ ಮೊದಲೇ ಶಸ್ತ್ರ ಚಿಕಿತ್ಸೆ ನಡೆಸಬೇಕು. ಆ ನಂತರ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಿದರೂ ನಿಷ್ಪ್ರಯೋಜಕ. ಈಗಾಗಲೇ ಸಾಕಷ್ಟು ಮಕ್ಕಳು ವೇಟಿಂಗ್ ಲಿಸ್ಟ್ ನಲ್ಲಿ ಇದ್ದಾರೆ ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್ ಭಾನುಮೂರ್ತಿ ತಿಳಿಸಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಕೇಳಿದರೆ, ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡುವಂತೆ ಹೇಳಲಾಗುವುದು. ತಡವಾಗುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಇಲಾಖೆಯ ಅಧಿಕಾರಿಗಳೊಡನೆ ಮಾತನಾಡಿ, ಚರ್ಚೆ ನಡೆಸಲಾಗುವುದು ಎಂದರು.