ಬೆಂಗಳೂರು: ಹಿಂದಿನ ಸರ್ಕಾರದ ಮತ್ತಷ್ಟು ಯೋಜನೆಗಳಿಗೆ ಬ್ರೇಕ್ ನೀಡಿರುವ ಸಿಎಂ ಯಡಿಯೂರಪ್ಪ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಇದೀಗ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಎಲಿವೇಟೇಡ್ ಕಾರಿಡಾರ್ ಯೋಜನೆಗೆ ತಡೆ ನೀಡಿದೆ.
ಲೋಕೋಪಯೋಗಿ ಇಲಾಖೆಯ ಕೆಆರ್ಡಿಸಿಎಲ್ ಸಂಸ್ಥೆ ಎಲಿವೇಟೆಡ್ ಕಾರಿಡಾರ್ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯ 07 ಜಂಕ್ಷನ್ಗಳನ್ನು ಸಂಪರ್ಕಿಸುವ 21.54 ಕಿಮೀ ಉದ್ದದ, ₹6,855 ಕೋಟಿ ಅಂದಾಜು ಮೊತ್ತದ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಎಲಿವೇಟೆಡ್ ಕಾರಿಡಾರ್ ರಸ್ತೆ ಯೋಜನೆಯ ಒಂದನೇ ಹಂತದ 03 ಪ್ಯಾಕೇಜ್ಗಳ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ವಾಸ್ತವ ಅಂದಾಜು ಮೊತ್ತದ ಕ್ರಿಯಾ ಯೋಜನೆಯನ್ನು ಹೊಸದಾಗಿ ತಯಾರಿಸುವಂತೆ ಆದೇಶ ನೀಡಿದ್ದಾರೆ.
ಎಲ್ಲರಿಗೂ ಸೂರು ಯೋಜನೆ ತನಿಖೆಗೆ:
2017-18ನೇ ಸಾಲಿನಲ್ಲಿ 49,368 ಮನೆಗಳನ್ನು ನಿರ್ಮಿಸುವ ಉದ್ದೇಶದಿಂದ, ₹ 2,662 ಕೋಟಿ ಪ್ರಕ್ರಿಯೆಯ ಟೆಂಡರ್ಗೆ ಚಾಲನೆ ನೀಡಲಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿರುವ ಬಗ್ಗೆ ದೂರುಗಳು ಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸಿಎಂ ಆದೇಶ ನೀಡಿದ್ದಾರೆ.
ಅಂಡರ್ ಗ್ರೌಂಡ್ ಡಸ್ಟ್ ಬಿನ್ ಅಳವಡಿಕೆ ತನಿಖೆ:
ಬಿಬಿಎಂಪಿ ವ್ಯಾಪ್ತಿಯ ಆಯ್ದ 200 ಪ್ರಮುಖ ಸ್ಥಳಗಳಲ್ಲಿ 500 ಟನ್ಗಳಷ್ಟು ತ್ಯಾಜ್ಯ ಸಂಗ್ರಹ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿರುವ ಅಂಡರ್ ಗ್ರೌಡ್ ಡಸ್ಟ್ ಬಿನ್ ಅಳವಡಿಕೆ, ಇವುಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಂಗ್ರಹ ಮಾಡಲು ಕ್ರೇನ್ಗಳನ್ನು ಒಳಗೊಂಡ 8 ಟ್ರಕ್ಗಳು, ಇವುಗಳ 60 ತಿಂಗಳ ನಿರ್ವಹಣೆ ಮತ್ತು ಪರಿಚಾರಕರ ಸೇವೆ, ಇವುಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಕಾರ್ಯ ಸಂಬಂಧ ನೀಡಿದ ಗುತ್ತಿಗೆಯಲ್ಲಿನ ಅವ್ಯವಹಾರ ಆರೋಪದ ಬಗ್ಗೆ ತನಿಖೆ ನಡೆಸಲು ಸಿಎಂ ಆದೇಶ ಹೊರಡಿಸಿದ್ದಾರೆ.
ಒಟ್ಟು ₹ 55,27,53,332 ಮೊತ್ತದ ಗುತ್ತಿಗೆಯನ್ನು ಸೋಂಟಾ ಇನ್ಫ್ರಾಟೆಕ್ ಸಂಸ್ಥೆಗೆ ಕಾರ್ಯಾದೇಶ ಪತ್ರವನ್ನು ನೀಡಲಾಗಿದ್ದು, ಇದರಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರಗಳು ನಡೆದಿವೆ ಮತ್ತು ಕಾರ್ಯಾದೇಶ ಪತ್ರದಲ್ಲಿರುವಂತೆ ಅಂಡರ್ ಗ್ರೌಂಡ್ ಅಳವಡಿಸಿಲ್ಲ ಎಂಬ ಬಗ್ಗೆ ದೂರುಗಳು ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನಾ ವರದಿ ಮತ್ತು ತನಿಖಾ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.