ಬೆಂಗಳೂರು:ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ. ಕೊರೊನಾ ಸೋಂಕು ತಡೆಗಟ್ಟಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಜನತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದು ಸರ್ಕಾರದ ಜೊತೆ ಸಹಕರಿಸುವಂತೆ ವಿಡಿಯೋ ಸಂದೇಶದ ಮೂಲಕ ಕೋರಿದ್ದಾರೆ.
ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಈ ಸೋಂಕು ಪತ್ತೆಯಾಗಿದೆ. ಈ ಸೋಂಕು ಹರಡದಂತೆ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕಾ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸೋಂಕು ಹರಡದಂತೆ ತಡೆಯಬೇಕೆಂದು ಸಿಎಂ ಬಿಎಸ್ವೈ ಜನರಲ್ಲಿ ಮನವಿ ಮಾಡಿದ್ದಾರೆ.
ಆದಷ್ಟು ಜನಜಂಗುಳಿಯಿಂದ ದೂರ ಉಳಿದುಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ. ಮನೆಯಲ್ಲೇ ಇರಿ. ಅಗತ್ಯವಿದ್ದರಷ್ಟೇ ಹೊರಗಡೆ ಬನ್ನಿ. ಆದಷ್ಟು ಸಭೆ, ಸಮಾರಂಭಗಳಿಂದ ದೂರವಿರಿ ಎಂದು ಸಿಎಂ ಸಲಹೆ ನೀಡಿದ್ದಾರೆ.
ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಮನೆ ಹಾಗೂ ಕಚೇರಿಗಳನ್ನ ಸ್ವಚ್ಛವಾಗಿರಿಸಿಕೊಳ್ಳಿ. ಶುದ್ಧ ಕುಡಿಯುವ ನೀರನ್ನೇ ಬಳಸಿ. ವಿದೇಶಗಳಿಂದ ಹಿಂತಿರುಗಿದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಬಂದರೆ ತಕ್ಷಣವೇ ವೈದ್ಯರನ್ನ ಸಂಪರ್ಕಿಸಿ. ಕೊರೊನಾ ದೃಡಪಟ್ಟರೆ 14 ದಿನ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯಿರಿ, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಯಾವುದೇ ಮಾಹಿತಿ ಬೇಕಾದಲ್ಲಿ ಆರೋಗ್ಯ ಇಲಾಖೆಯ ಸಂಖ್ಯೆ 104ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ನಮ್ಮ ಸರ್ಕಾರದ ಮಾಹಿತಿಯನ್ನಷ್ಟೇ ನಂಬಿ ಎಂದು ಸಿಎಂ ಬಿಎಸ್ವೈ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ.