ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಾಂಗ್ರೆಸ್ ಸರ್ಕಾರದ ಹೊಸ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. 2023-24 ಸಾಲಿನ ಹೊಸ ಬಜೆಟ್ಗೆ ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿರುವ ಸಿದ್ದರಾಮಯ್ಯ ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಗ್ಯಾರಂಟಿ ಆದಾಯ ಸಂಗ್ರಹಿಸುವತ್ತ ಚಿತ್ತ ನೆಟ್ಟಿದ್ದಾರೆ. ಅಷ್ಟಕ್ಕೂ ಕಳೆದ ಎರಡು ತಿಂಗಳಲ್ಲಿ ರಾಜ್ಯ ಬೊಕ್ಕಸ ಸೇರಿರುವ ಸ್ವಂತ ತೆರಿಗೆ ಏನಿದೆ ಎಂಬ ವರದಿ ಇಲ್ಲಿದೆ.
ಬಿಜೆಪಿಯನ್ನು ಸೋಲಿಸಿ ಭರ್ಜರಿ ಜಯದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಆರಂಭಿಸಿದ್ದು, ಇದೀಗ ಹೊಸ ಬಜೆಟ್ ಮಂಡನೆಗೆ ತಯಾರಿ ನಡೆಸಲಾಗುತ್ತಿದೆ. ಜುಲೈ 7ರಂದು ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡಿಸಲಿದ್ದಾರೆ. ನಿರ್ಗಮಿತ ಬಿಜೆಪಿ ಸರ್ಕಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿತ್ತು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದು ಸರ್ಕಾರ ರಚನೆ ಮಾಡಿದ್ದು, ಇದೀಗ ಕಾಂಗ್ರೆಸ್ ಸರ್ಕಾರ ಪೂರ್ಣ ಪ್ರಮಾಣದ ಹೊಸ ಬಜೆಟ್ ಮಂಡಿಸಲಿದೆ.
ಈಗಾಗಲೇ ಪೂರ್ವತಯಾರಿ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯರಿಗೆ ಹೊಸ ಬಜೆಟ್ನಲ್ಲಿನ ಸವಾಲು ಪಂಚ ಗ್ಯಾರಂಟಿಗಳಿಗೆ ಹಣ ಸಂಗ್ರಹ. ಪಂಚ ಗ್ಯಾರಂಟಿಗಳಿಗೆ ಸುಮಾರು 60,000 ಕೋಟಿ ರೂ. ಹಣ ಬೇಕಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಸಂಗ್ರಹದ ಬೃಹತ್ ಸವಾಲು ಸಿಎಂ ಸಿದ್ದರಾಮಯ್ಯ ಅವರ ಮುಂದೆ ಇದೆ. ಹಾಗಾಗಿ ಈ ಬಜೆಟ್ನಲ್ಲಿ ಪಂಚ ಗ್ಯಾರಂಟಿಗಳಿಗೆ ಆದಾಯ ಸಂಗ್ರಹಿಸುವುದೇ ಪ್ರಮುಖಾಂಶವಾಗಿರಲಿದೆ. ಅದಕ್ಕಾಗಿನೇ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಟಾರ್ಗೆಟ್ನ್ನು ಅಧಿಕಾರಿಗಳಿಗೆ ನೀಡಿದೆ. ಸೋಮವಾರ ಸಿಎಂ ಸಿದ್ದರಾಮಯ್ಯ ತೆರಿಗೆ ಸಂಗ್ರಹಣಾ ಇಲಾಖೆಗಳ ಜೊತೆ ಸಭೆ ನಡೆಸಿ ಆದಾಯ ಸಂಗ್ರಹವನ್ನು ವೃದ್ಧಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುಮಾರು 50,000 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹದ ಗುರಿಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಂದು ಕುರಿ ಲೆಕ್ಕ ಹಾಕಲು ಬಾರದವ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ.. ಈಗ 14ನೇ ಬಜೆಟ್ ಮಂಡನೆಗೆ ಸನ್ನದ್ಧ!
ವಾಣಿಜ್ಯ ತೆರಿಗೆ ಸಂಗ್ರಹ ಹೇಗಿದೆ?: ಬೊಮ್ಮಾಯಿ ಸರ್ಕಾರ ಮಂಡಿಸಿದ ತಮ್ಮ 2023-24 ಬಜೆಟ್ನಲ್ಲಿ ಒಟ್ಟು 2,26,909 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು 92,000 ಕೋಟಿ ರೂ.ಗೆ ನಿಗದಿ ಪಡಿಸಲಾಗಿತ್ತು. ಅದರಂತೆ ಕಳೆದ ಎರಡು ತಿಂಗಳಲ್ಲಿ ಸುಮಾರು 16,343 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ. ಏಪ್ರಿಲ್‌ನಲ್ಲಿ 9,311.84 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹಿಸಿದ್ದರೆ, ಮೇ ತಿಂಗಳಲ್ಲಿ 7,031.37 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಕಳೆದ ಬಾರಿ ಇದೇ ಎರಡು ತಿಂಗಳ ಅವಧಿಯಲ್ಲಿ 21,528 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೊದಲ ಎರಡು ತಿಂಗಳಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ 5,185 ಕೋಟಿ ರೂ. ನಷ್ಟು ಕುಂಠಿತವಾಗಿದೆ.
ಅಬಕಾರಿ ಸಂಗ್ರಹದ ಸ್ಥಿತಿಗತಿ: 2023-24 ಸಾಲಿನ ಬೊಮ್ಮಾಯಿ ಬಜೆಟ್ನಲ್ಲಿ 35,000 ಕೋಟಿ ರೂ ಅಬಕಾರಿ ಆದಾಯ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಅದರಂತೆ ಕಳೆದ ಎರಡು ತಿಂಗಳಲ್ಲಿ ಸುಮಾರು 4,758 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹವಾಗಿದೆ ಎಂದು ಇಲಾಖೆ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ 2,308.18 ಕೋಟಿ ರೂ. ಸಂಗ್ರಹವಾಗಿದೆ. ಮೇ ತಿಂಗಳಲ್ಲಿ ಸುಮಾರು 2,450 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹವಾಗಿದೆ. ಕಳೆದ ಬಾರಿ ಎರಡು ತಿಂಗಳ ಅವಧಿಗೆ ಸುಮಾರು 4,741.39 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹ ಮಾಡಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅಬಕಾರಿ ಆದಾಯ ಸಂಗ್ರಹ ಸಾಧ್ಯವಾಗಿಲ್ಲ.
ಇದನ್ನೂ ಓದಿ: Indira Canteen: ಇಂದಿರಾ ಕ್ಯಾಂಟೀನ್ ಮೆನುಗೆ 4 ಹೊಸ ಆಹಾರ ಸೇರ್ಪಡೆ; ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯ
ನೋಂದಣಿ ಹಾಗೂ ಮುದ್ರಾಂಕ ಶುಲ್ಕ: ಬೊಮ್ಮಾಯಿ ತಮ್ಮ ಕೊನೆಯ ಬಜೆಟ್ನಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರೂಪದಲ್ಲಿ ಸುಮಾರು 19,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಅದರಂತೆ ಕಳೆದ ಎರಡೂವರೆ ತಿಂಗಳಲ್ಲಿ ಸುಮಾರು 3,425 ಕೋಟಿ ರೂ. ರಾಜಸ್ವ ಸಂಗ್ರಹಣೆ ಮಾಡಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಏಪ್ರಿಲ್ ತಿಂಗಳಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರೂಪದಲ್ಲಿ 1,273 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ ಸುಮಾರು 1,352 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. ಅದೇ ಜೂನ್ 16ರ ವರೆಗೆ ಸುಮಾರು 800 ಕೋಟಿ ರೂ. ಸಂಗ್ರಹಿಸಿತ್ತು. ಕಳೆದ ಬಾರಿ ಇದೇ ಅವಧಿಗೆ ಸುಮಾರು 3,221 ಕೋಟಿ ರಾಜಸ್ವ ಸಂಗ್ರಹ ಮಾಡಲಾಗಿತ್ತು. ಈ ಬಾರಿ ಸುಮಾರು 200 ಕೋಟಿ ರೂ. ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋಟಾರು ವಾಹನ ತೆರಿಗೆ ಸಂಗ್ರಹ ಏನಿದೆ?: ಬೊಮ್ಮಾಯಿ ಅವರ ಕಳೆದ ಬಜೆಟ್ನಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ ಸುಮಾರು 10,500 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಅದರಂತೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ ಸುಮಾರು 1,604.63 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಮೋಟಾರು ವಾಹನ ತೆರಿಗೆ ರೂಪದಲ್ಲಿ 794.63 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದೆ. ಇನ್ನು ಮೇ ತಿಂಗಳಲ್ಲಿ ಸುಮಾರು 810 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದೆ ಎನ್ನಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಮೋಟಾರು ವಾಹನ ತೆರಿಗೆ ರೂಪದಲ್ಲಿ ಸುಮಾರು 1,401.18 ಕೋಟಿ ರೂ. ಸಂಗ್ರಹಿಸಿತ್ತು. ಈ ಬಾರಿ ಅಲ್ಪ ಮಟ್ಟಿನ ಚೇತರಿಕೆ ಕಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Congress Guarantee Scheme: ಮಹಿಳೆಯರಿಗೆ ಬಹುನಿರೀಕ್ಷಿತ ಉಚಿತ ಬಸ್ ಪ್ರಯಾಣ .. ಇಲ್ಲಿದೆ ಶಕ್ತಿ ಯೋಜನೆಯ ಸಮಗ್ರ ಚಿತ್ರಣ