ಬೆಂಗಳೂರು: ಶೀತ, ಕೆಮ್ಮು, ಗಂಟಲು ನೋವಿನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ರಾಂತಿಗೆ ಜಾರಿದ್ದಾರೆ. ನಿನ್ನೆಯಿಂದಲೇ ಸಿದ್ದರಾಮಯ್ಯ ಅವರಿಗೆ ಶೀತ ಕಾಣಿಸಿಕೊಂಡು ಕೆಮ್ಮು ಇತ್ತು. ಇಂದು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿಗಳು ಯಾರನ್ನೂ ಭೇಟಿ ಮಾಡುತ್ತಿಲ್ಲ.
ಅವರ ಭೇಟಿಗೆ ಬಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಾಪಸ್ ಆಗಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಇಂದಿನ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ನಿನ್ನೆ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದ ವೇಳೆ ಹಲವಾರು ಬಾರಿ ಸಿದ್ದರಾಮಯ್ಯ ಅವರು ಕೆಮ್ಮುತ್ತಲೇ ಬಜೆಟ್ ಭಾಷಣವನ್ನು ಓದಿದ್ದರು.
ಹವಾಮಾನದಿಂದಾಗಿ ಅವರಿಗೆ ನಿನ್ನೆಯೇ ಶೀತ ಕಾಣಿಸಿಕೊಂಡಿದ್ದು, ಅದನ್ನು ಲೆಕ್ಕಿಸದೇ ಸಿಎಂ ಬಜೆಟ್ಅನ್ನು 2.50 ನಿಮಷಗಳ ಕಾಲ ಓದಿ ಮುಗಿಸಿದ್ದರು. ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಜೆಟ್ಗೆ ಸಂಬಂಧಿಸಿದಂತೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದ ಸಿದ್ದರಾಮಯ್ಯ ಅವರು ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದರು. ರಾತ್ರಿಯಿಂದ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
128 ಪುಟಗಳ ಬಜೆಟ್: ಸಿಎಂ ಸಿದ್ದರಾಮಯ್ಯನವರು ನಿನ್ನೆ 2023-2024ರ ಆಯವ್ಯಯ ಭಾಷಣವನ್ನು ಬಳಲಿಕೆಯ ನಡುವೆ ಮಾಡಿರುವುದು ಅವರ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಮಧ್ಯಾಹ್ನ 12.05 ನಿಮಿಷಕ್ಕೆ ಬಜೆಟ್ ಮಂಡನೆ ಮಾಡಲು ಶುರು ಮಾಡಿದ್ದು, ಒಟ್ಟು 2 ಗಂಟೆ 50 ನಿಮಿಷದಲ್ಲಿ ಪೂರ್ಣ ಮಾಡಿದ್ದಾರೆ. ಬಜೆಟ್ನ ವಿವರ 128 ಪುಟಗಳಿದ್ದು, ನಡುನಡುವಲ್ಲಿ ಕೆಮ್ಮಿಕೊಂಡು, ಸ್ವಲ್ಪ ವಿಶ್ರಾಂತಿ ಪಡೆದು, ಒಮ್ಮೆ ನೀರು ಕುಡಿದು 3.28 ಲಕ್ಷ ಕೋಟಿ ರೂ. ದಾಖಲೆಯ ಬಜೆಟ್ನ್ನು ನಿಂತೇ ಮಂಡನೆ ಮಾಡಿದ್ದರು. ಬಜೆಟ್ ಪ್ರಾರಂಭದಲ್ಲಿ ಗಿರೀಶ್ ಕಾರ್ನಾಡ್ರ ಯಯಾತಿ ನಾಟಕ ಸಾಲುಗಳಾದ-'ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ಹೇಗೆ ನಡೆಯಲಿ' ಎಂದು ಆಡಳಿತದ ಬಗ್ಗೆ ವಿವರಿಸುತ್ತಾ, ದಾರ್ಶನಿಕರ, ಬರಹಗಾರರ, ಚಿಂತಕರ ನುಡಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರಕ್ಕೆ ಟಕ್ಕರ್ ನೀಡಿದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರುವ ಬಜೆಟ್ ಮಂಡನೆಗೆ ಸಚಿವರಾದ ಎಂ ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು ತಮ್ಮ ಮೆಚ್ಚುಗೆಯನ್ನು ಮಾಧ್ಯಮ ಪ್ರಕಟಣೆ ಮೂಲಕ ನಿನ್ನೆಯೇ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಜನಪರ, ಇತಿಹಾಸದಲ್ಲೇ ಅಪರೂಪದ, ಬೆಳವಣಿಗೆಗೆ ಪೂರಕ ಹೃದಯಸ್ಪರ್ಶಿ, ಸರ್ವರಿಗೂ ಸಮಪಾಲಿನ ಬಜೆಟ್ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಮಹತ್ವದ ಸಭೆ: ಸಿಎಂ, ಡಿಸಿಎಂ ಭಾಗಿ