ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಶಾಂತಿಯುತ ಹಾಗೂ ಭಯವಿಲ್ಲದ ವಾತಾವರಣ ನಿರ್ಮಿಸಲು ಬೆಂಗಳೂರು ನಗರ ಪೊಲೀಸರು ಶ್ರಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ತಮ್ಮನ್ನು ಭೇಟಿಯಾದ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಸಂಪೂರ್ಣವಾಗಿ ಅಪರಾಧ ನಿರ್ಮೂಲನೆ ಮಾಡಲಾಗದಿದ್ದರೂ, ಕಡಿಮೆಗೊಳಿಸಲು ಸಾಧ್ಯವಿದೆ. ತಡೆಯಲು ಸಾಧ್ಯವಿರುವ ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಗರದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟುವಂತೆ ಸೂಚನೆ ನೀಡಿದ ಮುಖ್ಯಮಂತ್ರಿಗಳು, ಸಮಾಜದ ಒಳಿತಿಗಾಗಿ ಡ್ರಗ್ಸ್ ಮಾಫಿಯಾವನ್ನು ಮಟ್ಟಹಾಕುವ ಬಗ್ಗೆ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ತೀರ್ಮಾನ ಕೈಗೊಂಡು ಅನುಷ್ಠಾನಗೊಳಿಸಬೇಕು. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿಯಾಗಿ ಜೀವನ ಮಾಡುವವರನ್ನು ಗುರುತಿಸಿ, ಅವರ ರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಬಲಪಡಿಸಬೇಕು ಎಂದು ಸೂಚಿಸಿದರು.
ನಗರದಲ್ಲಿರುವ 241 ಹೊಯ್ಸಳ ವಾಹನಗಳ ಗಸ್ತು ಪಡೆಯನ್ನು ಬಲಪಡಿಸಿ, ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿ ರಿಯಲ್ ಎಸ್ಟೇಟ್‌ನವರ ಜೊತೆ ಶಾಮೀಲಾಗುವುದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಸರಿಯಲ್ಲ. ಇದರಿಂದ ಜನರಿಗೆ ಪೊಲೀಸ್ ವ್ಯವಸ್ಥೆಯ ಮೇಲಿನ ವಿಶ್ವಾಸ ಹೋಗುತ್ತದೆ ಎಂದರು.
ಸರ್ಕಾರ ಎಂದಿಗೂ ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ನಿಮಗೆ ಹೇಳುವುದಿಲ್ಲ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಸರ್ಕಾರ ನಿಮ್ಮ ಮೇಲೆಯೇ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ನಗರದಲ್ಲಿ ರೌಡಿಸಂ ಅನ್ನು ಮಟ್ಟ ಹಾಕಬೇಕು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಬಂದೋಬಸ್ತ್ ವ್ಯವಸ್ಥೆ ಉತ್ತಮವಾಗಿ ಮಾಡಿರುವ ಬಗ್ಗೆ ಬೆಂಗಳೂರು ನಗರ ಪೊಲೀಸರಿಗೆ ಮುಖ್ಯಮಂತ್ರಿಗಳು ಅಭಿನಂದನೆ ತಿಳಿಸಿದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ರಿಂದ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಸಿಎಂ ಸಮ್ಮತಿ