ಬೆಂಗಳೂರು: ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಅಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಸೌಧದಲ್ಲಿ ಇಂದು ನಡೆದ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಲ್ಯಾಪ್ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಸಭೆ ನಡೆಯುವಾಗಲೇ ದೂರವಾಣಿ ಮೂಲಕ ಸೂಚನೆ ನೀಡಿದರು. ವಿವಿಗಳಲ್ಲಿರುವ ಎಲ್ಲಾ ಸಮುದಾಯಗಳ ಪ್ರತಿ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ವಿತರಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹5,470 ಕೋಟಿ: ರಾಜ್ಯದ ವಿವಿಗಳಲ್ಲಿ ಮಂಜೂರಾದ ಹುದ್ದೆಗಳ ಶೇ.50 ಕ್ಕೂ ಹೆಚ್ಚು ಖಾಲಿ ಇದ್ದು, 1,882 ಹುದ್ದೆಗಳಷ್ಟೇ ಭರ್ತಿಯಾಗಿವೆ. ವಿಶ್ವವಿದ್ಯಾಲಯಗಳ ಸಂಪನ್ಮೂಲದಿಂದಲೇ 2,865 ಅತಿಥಿ ಉಪನ್ಯಾಸಕರಿಗೆ ವೇತನ ಭರಿಸುವ ಕಾರಣ, ಅವರಿಗೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕುಲಪತಿಗಳು ಮತ್ತು ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ನಿವೃತ್ತಿ ವೇತನ ವಿತರಣೆಯಲ್ಲಿ ಹಳೆಯ ವಿವಿಗಳು ವಿಭಜನೆಯಾದರೂ ಹಳೆಯ ವಿವಿಗಳು ಮಾತ್ರ ನಿವೃತ್ತಿ ವೇತನ ಪಾವತಿಸುತ್ತಿದ್ದಾರೆ. ಇದರಿಂದ ಹಳೆಯ ವಿವಿಗಳ ಆರ್ಥಿಕ ಹೊರೆ ಹೆಚ್ಚಾಗಿದೆ. ಪ್ರಸಕ್ತ ಆಯವ್ಯಯದಲ್ಲಿ ಒಟ್ಟಾರೆಯಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ 5,470 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, 2,474 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಕುಲಪತಿಗಳು ಮುಖ್ಯಮಂತ್ರಿಗಳಿಗೆ ಸಮಸ್ಯೆ ಹೇಳಿಕೊಂಡರು.
ಆಯವ್ಯಯ ಹಂಚಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ನಾವು ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಇದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ಆಯವ್ಯಯದಲ್ಲಿ ಶೇ.88 ರಷ್ಟು ಅನುದಾನ ವೇತನಕ್ಕೆ ಬಳಕೆಯಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಕೈಗಾರಿಕೋದ್ಯಮಗಳ ಬೇಡಿಕೆಗೆ ಅನುಗುಣವಾದ ಪಠ್ಯಕ್ರಮ ರೂಪಿಸಿ, ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಅನುವಾಗುವಂತಹ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಪದವೀಧರ ಯುವಕ-ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಂದ ಪ್ರಭಾವಿತರಾಗಬಾರದು. ಅದಕ್ಕೆ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪುನರ್‌ವಿಮರ್ಶೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕುಲಪತಿಗಳ ಮತ್ತು ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹೇಳಿದರು.
ಬೇರೆ ಬೇರೆ ಭಾಷೆ, ಸಂಸ್ಕೃತಿ ಮತ್ತಿತರ ಅಂಶಗಳ ಕಾರಣದಿಂದ ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ಧತಿ ಸಾಧ್ಯವಿಲ್ಲ. ಕುಲಪತಿಗಳು ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೀರಿ ಎಂದು ಭಾವಿಸಿದ್ದೇನೆ. ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿದ್ದಾಗ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ.
ಸಮಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ನಾವು ವಿವಿಗಳ ಮೂಲಕ ಕೊಡಬೇಕು. ಸಂವಿಧಾನಕ್ಕೆ ವಿರುದ್ಧವಾದ ಚಟುವಟಿಕೆ ಮತ್ತು ಕ್ರಮಗಳು ವಿವಿಗಳಲ್ಲಿ ನಡೆಯಬಾರದು. ವಿವಿಗಳಲ್ಲಿ ಧರ್ಮ ನಿರಪೇಕ್ಷತೆ, ಮೌಢ್ಯರಹಿತ, ಕಂದಾಚಾರರಹಿತ ಹಾಗೂ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸುವ ಶಿಕ್ಷಣ ನೀಡಬೇಕು. ಕೆಲವೊಮ್ಮೆ ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ಕರ್ತೃಗಳು, ಸಾಮಾಜಿಕ ಚಿಂತಕರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಭೆ, ಸಮಾರಂಭಗಳನ್ನು ನಡೆಸಿರುವುದನ್ನು ಕೆಲವು ವಿವಿಗಳಲ್ಲಿ ನೋಡಿದ್ದೇನೆ. ಜಾತ್ಯತೀತ ವಿರೋಧಿ ಮನೋಭಾವವನ್ನು ಪುರಸ್ಕರಿಸಬಾರದು.
ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಕಾರಣಕ್ಕೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಇಲ್ಲವಾದರೆ ಉನ್ನತ ಶಿಕ್ಷಣ ಸರಿದಾರಿಯಲ್ಲಿ ಸಾಗದೆ ಹೋದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದರು.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ: ಅತಿಥಿ ಉಪನ್ಯಾಸಕರ ನೇಮಕದ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳನ್ನು ನೇಮಕ ಮಾಡಕೂಡದು. ವಿವಿಯ ವಿದ್ಯಾರ್ಥಿಗಳು ಮನುಷ್ಯತ್ವ ಇರುವ ವ್ಯಕ್ತಿಗಳಾಗಿ ಬೆಳೆಯಬೇಕು. ಹುಟ್ಟುವಾಗ ಎಲ್ಲರೂ ವಿಶ್ವಮಾನವರು, ಬೆಳೆಯುತ್ತಾ ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದಂತೆ ಆಗಬಾರದು. ಸಾಕಷ್ಟು ಕೊರತೆಗಳನ್ನು ಇಟ್ಟುಕೊಂಡು ಜಿಲ್ಲೆಗೊಂದು ವಿವಿ ಮಾಡುವ ತೀರ್ಮಾನ ಸರಿಯಲ್ಲ. ಮೂಲಸೌಲಭ್ಯ ಒದಗಿಸಲಾಗದಿದ್ದರೆ ಪ್ರಯೋಜನವಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಶೇ.3 ಕ್ಕಿಂತ ಹೆಚ್ಚು ಅನುದಾನ ಒದಗಿಸಲಾಗಿತ್ತು. ಮುಂದಿನ ವರ್ಷದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ಯಾವುದೇ ಲೋಪವಾಗಬಾರದು. ಒಂದೇ ಬಾರಿ ಎಲ್ಲ ಪರಿಹಾರ ಒದಗಿಸಲಾಗದು. ಆದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಸಂಶೋಧನೆಯ ಫಲ ಗ್ರಂಥಾಲಯಗಳಲ್ಲಿ ಉಳಿಯಬಾರದು. ಸಮಾಜವನ್ನು ತಲುಪಬೇಕು. ಆಗ ಮಾತ್ರ ಸಂಶೋಧನೆ ಫಲಪ್ರದವಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಕಲಬುರಗಿ: ಪಿಎಂ ಮಿತ್ರ ಟೆಕ್ಸ್ ಟೈಲ್ ಪಾರ್ಕ್.. ಒಂದು ತಿಂಗಳಲ್ಲಿ ಜಮೀನು ಹಸ್ತಾಂತರಕ್ಕೆ ಸಚಿವ ಶಿವಾನಂದ ಪಾಟೀಲ ಸೂಚನೆ