ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೂ ಸಾಕಷ್ಟು ಹೆಚ್ಚಿನ ಒತ್ತು ಕೊಟ್ಟಿರುವುದು ಗಮನಕ್ಕೆ ಬರುತ್ತದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಅವರ ಸಂಪುಟದ ಕೆಲವರು ಕಳೆದ ಮೇ ತಿಂಗಳಲ್ಲಿ ದಾವೋಸ್ಗೆ ಐದು ದಿನದ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಹಲವು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ವಾಪಸ್ ಆಗಿದ್ದು, ಅದು ಈಗ ಕಾರ್ಯಾಚರಣೆ ಹಂತದಲ್ಲಿದೆ.
ಬಸವರಾಜ್ ಬೊಮ್ಮಾಯಿ ಪ್ರವಾಸದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದಗಳ ವಿವರವನ್ನು ಗಮನಿಸುವುದಾದ್ರೆ, ಸೀಮನ್ ಹೆಲ್ತ್ ಇಂಜಿನಿಯರ್ ಸುಮಾರು 13 ಸಾವಿರ ಕೋಟಿ ಇನ್ವೆಸ್ಟ್ ಮಾಡಲು ಒಪ್ಪಿದ್ದಾರೆ. ಲೂಲು ಅವರು ಈಗಾಗಲೇ ಕರ್ನಾಟಕದಲ್ಲಿ ಹೂಡಿಕೆ ಮಾಡಿದ್ದಾರೆ. ಮತ್ತೆ ಎರಡು ಸಾವಿರ ಕೋಟಿ ಹೂಡಿಕೆ ಮಾಡಲು ತೀರ್ಮಾನಿಸಿದ್ದಾರೆ. ಜುಬಿಲಿಯಂಟ್ ಸಂಸ್ಥೆ 700 ಕೋಟಿ ಹೂಡಲು ತೀರ್ಮಾನ ಮಾಡಿದ್ದಾರೆ.

ಹಿಟಾಚಿ ಕಂಪನಿ 2,000 ಇಂಜಿನಿಯರ್ಗಳಿಗೆ ಉದ್ಯೋಗ ನೀಡಲು ಮುಂದೆ ಬಂದಿದ್ದಾರೆ. ಯೂರೊ ಗ್ರೂಪ್‌ನವರು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕದಲ್ಲಿ ಕಂಪನಿ ಸ್ಥಾಪಿಸಲು ಮನವಿ ಮಾಡಲಾಗಿದೆ. ಒಟ್ಟಾರೆ ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚು ಹೊತ್ತು ಕೊಡಲು ತೀರ್ಮಾನಿಸಿದ್ದು, ಮುಖ್ಯಮಂತ್ರಿಗಳ ಈ ಪ್ರವಾಸದಲ್ಲಿ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಬಿಯರ್ ಘಟಕ ಸ್ಥಾಪನೆ: ಎಬಿ ಸಮೂಹ ನಂಜನಗೂಡಿನಲ್ಲಿ ಈಗಾಗಲೇ ತಮ್ಮ ಅಸ್ತಿತ್ವ ಹೊಂದಿದ್ದು, ಈಗ ಆಲ್ಕೋಹಾಲಿಕ್ ಅಂಶ ರಹಿತವಾದ ಬಿಯರ್ ಘಟಕ ಸ್ಥಾಪನೆ ಮಾಡಲು ಸಿದ್ಧರಾಗಿದ್ದಾರೆ. ನಿಯಮಗಳ ನಿರ್ಬಂಧ ಇರುವ ಹಿನ್ನೆಲೆ ಈ ವಿಚಾರವಾಗಿ ಮಾತುಕತೆ ನಡೆದಿದೆ. ನೈದರ್ ಎಲೆಕ್ಟ್ರಿಕಲ್ ವಿಶ್ವದಲ್ಲೇ ನಂಬರ್ ಒನ್ ಆಗಿದ್ದು, 300 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಅಂದಾಜು ನಾಲ್ಕು ಸಾವಿರ ಜನರಿಗೆ ಉದ್ಯೋಗ ಇದರಿಂದ ಲಭಿಸಲಿದೆ.
ಕಂಪನಿಗಳ ಜೊತೆ ಚರ್ಚೆ: ಭಾರತಿ ಏರ್ಟೆಲ್ನಿಂದ ಮೆಗಾ ಡಾಟಾ ಪವರ್ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಆರಂಭವಾಗಿದೆ. ಅದಾನಿ ಗ್ರೂಪ್‌ನವರು ಮೆಗಾ ಡೇಟಾ ಕೇಂದ್ರ, ನವೀಕರಿಸಬಹುದಾದ ಇಂಧನ ಮಾದರಿಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಹನಿ ವೆಲ್ ಎಲೆಕ್ಟ್ರಾನಿಕ್ ಮತ್ತು ಕ್ಯಾಮೆರಾ ಕಂಪನಿ ಇದೆ. ಅವರೂ ಕೂಡ ಇಲ್ಲಿ ಪ್ಲಾಂಟ್ ಹಾಕಲು ಚಿಂತನೆ ಮಾಡಿದ್ದಾರೆ. 60-65 ಸಾವಿರ ಕೋಟಿ ಹೂಡಿಕೆ ಭರವಸೆಗೆ ಬದ್ಧತೆ ನೀಡಲಾಗಿದೆ. 25 ಕಂಪನಿಗಳ ಜೊತೆ ಚರ್ಚೆಯಾಗಿದೆ.

ಟೆಕ್ ಸಮ್ಮಿಟ್ ಮಾಡಲು ನಿರ್ಧಾರ: ನವೆಂಬರ್ ತಿಂಗಳಲ್ಲಿ ಜಿಮ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕೋವಿಡ್ ನಂತರದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಪಾಲು ಬಹುದೊಡ್ಡದಿದೆ. ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆಗೆ. ನಾವು ಕೂಡ ಮೂಲ ಸೌಕರ್ಯ ಅಭಿವೃದ್ಧಿ ಮಾಡಬೇಕಿದೆ. ನವೆಂಬರ್ 2 ರಿಂದ 4ರ ವರೆಗೆ ಬಡವಾಳ ಹೂಡಿಕೆದಾರರ ಸಮಾವೇಶ, ನವೆಂಬರ್ 16-17 ಟೆಕ್ ಸಮ್ಮಿಟ್ ಮಾಡಲು ತೀರ್ಮಾನಿಸಲಾಗಿದೆ.
ದಾವೋಸ್ ಶೃಂಗಸಭೆ: ದಾವೋಸ್ ನಲ್ಲಿ ಆರ್ಥಿಕ ಶೃಂಗಸಭೆ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಈ ಸಭೆಯಲ್ಲಿ ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಾರೆ. ಈ ಬಾರಿ ಕೋವಿಡ್ ನಂತರ ಇಡೀ ವಿಶ್ವದ ಆರ್ಥಿಕತೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ವಿಶ್ವದ ಉದ್ಯಮಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ದಾವೋಸ್ ನಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಮಹತ್ವದ ಚರ್ಚೆ ನಡೆದಿದೆ.
ಇದನ್ನೂ ಓದಿ: ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಬದಲು, ಜೆ.ಪಿ. ನಡ್ಡಾ ಬರುತ್ತಾರೆ: ಸಿಎಂ
ಉದ್ಯಮಿಗಳು ಭಾರತಕ್ಕೆ ಆದ್ಯತೆ ನೀಡಿದ್ದು ನೋಡಿದರೆ ಭಾರತ ಒಂದು ಉದಯೋನ್ಮುಖ ಆರ್ಥಿಕತೆ ಹೊಂದುವ ರಾಷ್ಟ್ರವಾಗಿ ಬೆಳೆಯುತ್ತಿದೆ. ಯುರೋಪಿನ ರಾಷ್ಟ್ರಗಳು ಕೊವಿಡ್ ನಿಂದ ಆರ್ಥಿಕ ಸಂಕಷ್ಟ ಎದರಿಸುತ್ತಿದ್ದು, ಚೀನಾದಲ್ಲಿ ಈಗಲೂ ಕೋವಿಡ್ ಮುಂದುವರೆದಿದೆ. ಹೀಗಾಗಿ ಉದ್ಯಮಿಗಳು ಭಾರತದೆ ಕಡೆಗೆ ನೋಡುವಂತೆ ಮಾಡಿದೆ. ಈ ಸಂದರ್ಭ ಹೆಚ್ಚು ಹೆಚ್ಚು ಹೂಡಿಕೆಯನ್ನು ನಾವು ನಿರೀಕ್ಷಿಸಿದ್ದು, ದಾವೋಸ್ ಪ್ರವಾಸ ಈ ನಿಟ್ಟಿನಲ್ಲಿ ಉತ್ತಮ ಫಲ ಕೊಟ್ಟಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.