ಬೆಂಗಳೂರು: ಯಾದಗಿರಿಯಲ್ಲಿ ಚುನಾವಣೆಗೂ ಮುನ್ನ ಸಾವಿರಾರು ರೈತರ ಸಾಲಮನ್ನಾ ಮಾಡಿ ಬ್ಯಾಂಕ್ ಗಳಿಗೆ ಹಣ ಜಮಾವಣೆ ಮಾಡಲಾಗಿತ್ತು.ಆದರೆ, ಚುನಾವಣೆ ಮುಗಿದ ಕೂಡಲೇ ಆ ಹಣ ವಾಪಸ್ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಿಎಂ ಕುಮಾರಸ್ವಾಮಿ ಅವರು ಯಾದಗಿರಿ ರೈತರ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಕ್ಷಮೆ ಕೇಳುವಂತೆ ಬಿ ಎಸ್ ಯಡಿಯೂರಪ್ಪ ಆಗ್ರಹ ಇಂತಹ ಪ್ರಕರಣವನ್ನ ದೇಶದ ಇತಿಹಾಸದಲ್ಲಿ ಇದು ವರೆಗೂ ಕಂಡು ಕೇಳಿಲ್ಲ, ನಡೆದಿಲ್ಲ. ರಾಜ್ಯದ ರೈತರಿಗೆ ಮುಖ್ಯಮಂತ್ರಿಗಳು ದ್ರೋಹ ಮಾಡಿದ್ದಾರೆ. ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಯಾಕೆ ವಾಪಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಬೇಕು. ರಾಜ್ಯದ ಜನರ ಕ್ಷಮೆ ಕೇಳಬೇಕು, 24 ಗಂಟೆಯಲ್ಲಿ ಸಾಲಮನ್ನ ಮಾಡ್ತೀವಿ ಅಂತ ಹೇಳಿ ಎಲ್ರಿಗೂ ದ್ರೋಹ ಮಾಡಿದಾರೆ ಎಂದರು.
ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಬರ, ಸಾಲಮನ್ನ, ಹಾಗೂ ಜಿಂದಾಲ್ ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ಬಿಜೆಪಿಯಿಂದ 14,15,16 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಬಿಎಸ್ವೈ ಘೋಷಿಸಿದರು.
ಜಿಂದಾಲ್ ವಿಚಾರವಾಗಿ ನಿರ್ಧಾರ ವಾಪಾಸ್ ಪಡೆದ ವಿಚಾರ ಗೊತ್ತಿಲ್ಲ. ಜಿಂದಾಲ್ ಗೆ ಭೂಮಿ ಮಾರಾಟಕ್ಕೆ ನಮ್ಮ ವಿರೋಧ ಇದೆ. ಈ ಮಾರಾಟ ಖಂಡಿಸಿ ಸಹ ಪ್ರತಿಭಟನೆ ಇಟ್ಟುಕೊಂಡಿದ್ದೇವೆ. ನಿರ್ಧಾರ ವಾಪಸ್ ಕುರಿತು ಸರ್ಕಾರ ಚಿಂತನೆ ಮಾಡ್ತಿರುವ ಬಗ್ಗೆ ಗೊತ್ತಿಲ್ಲ. ಲೀಸ್ ಮುಂದುವರಿಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಜಿಂದಾಲ್ ಗೆ ಏಕಾಏಕಿ ಭೂಮಿ ಮಾರಾಟಕ್ಕೆ ನಮ್ಮ ವಿರೋಧವಿದೆ. ಸರ್ಕಾರ ಕಿಕ್ ಬ್ಯಾಕ್ ಗೆ ತಲೆಬಾಗದೆ, ಕಾನೂನಿನ ಚೌಕಟ್ಟಲ್ಲೆ ಏನು ಮಾಡಬೇಕು ಮಾಡಲಿ. ಆದರೆ ಜಮೀನು ಮಾರಾಟಕ್ಕೆ ಮುಂದಾಗಬಾರದು ಎಂದು ಇದೇ ವೇಳೆ ಒತ್ತಾಯಿಸಿದರು.
ಇನ್ನು ಐಎಂಎ ಜ್ಯುವೆಲ್ಸ್ ಅಂಗಡಿ ದೋಖಾ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಐಎಂಎ ಮೂಲಕ ಜನರಿಗೆ ವಂಚನೆ ಆಗಿರುವುದು ಬಹಳ ಅನ್ಯಾಯ, ಆತ ಬಂದು ಜನರಿಗೆ ಅವರ ಹಣ ವಾಪಸ್ ಕೊಡಲಿ. ಸಾಮಾನ್ಯ ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ರೋಷನ್ ಬೇಗ್ ಮತ್ತೊಬ್ಬರು ಅಂತ ಹೆಸರು ಹೇಳಲು ನಾನು ಇಷ್ಟಪಡಲ್ಲ. ಯಾರದ್ದೋ ಮೇಲೆ ಆರೋಪ ಮಾಡೋದನ್ನು ಬಿಟ್ಟು ಮಾಲೀಕ ಬಂದು ಜನರಿಗೆ ಹಣ ಕೊಡಲಿ. ಆ ಮಾಲೀಕ ಎಲ್ಲಿದ್ದಾನೆ ಅಂತ ಹುಡುಕುವ ಕೆಲಸ ಮೊದಲು ಆಗಲಿ ಎಂದರು.