ಬೆಂಗಳೂರು: ಗಣಿ ಗುತ್ತಿಗೆ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಏಕಗವಾಕ್ಷಿ ವ್ಯವಸ್ಥೆಯ ಮಾದರಿಯಲ್ಲಿ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಇಂದು ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಯ ಸಂಸ್ಥೆಗಳಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ತೀರುವಳಿ ಪಡೆಯಲು ಬಹಳಷ್ಟು ಪ್ರಕರಣಗಳು ಬಾಕಿ ಇರುವ ಕುರಿತು ಚರ್ಚಿಸಲಾಯಿತು. ಇದಕ್ಕೆ ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ನೀಡದೇ ಇರುವುದು ಕಾರಣ ಎಂಬುದನ್ನು ಗುರುತಿಸಲಾಯಿತು. ಇದಕ್ಕಾಗಿ ಆನೆಗಳು ಮತ್ತಿತರ ವನ್ಯಜೀವಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಲು ಸಿದ್ಧ ಇರುವ ರೈತರು ಅರಸೀಕರೆ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿದ್ದಾರೆ. ಇಂತಹ ರೈತರಿಗೆ ಈ ಸಂಸ್ಥೆಗಳು ಜಮೀನು ಖರೀದಿಸಿ ಅರಣ್ಯೀಕರಣಕ್ಕೆ ಒದಗಿಸಲು ಅನುವು ಮಾಡಿಕೊಡುವಂತೆ ತಿಳಿಸಿದರು.
ರಾಜ್ಯದಲ್ಲಿ ಖನಿಜಾನ್ವೇಷಣೆಯನ್ನು ಭಾರತ ಸರ್ಕಾರಿ ಸ್ವಾಮ್ಯದ ಕೆಐಓಸಿಎಲ್ ಮತ್ತು ಎಂಇಸಿಎಲ್ ಮೂಲಕ ಕೈಗೊಳ್ಳಲು ಅನುಮತಿಗಾಗಿ ಭಾರತ ಸರ್ಕಾರಕ್ಕೆ ಪ್ರವೇಶ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳಿಗೆ ಇರುವ ಆಕ್ಷೇಪಣೆಗಳನ್ನು ಸರಿಪಡಿಸಿ ತ್ವರಿತವಾಗಿ ತೀರುವಳಿ ಪಡೆಯುವಂತೆ ಈ ಸಂಸ್ಥೆಗಳೊಂದಿಗೆ ಚರ್ಚಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದೆ ಅಕ್ರಮ ಗಣಿಗಾರಿಕೆಯಿಂದ ಜಪ್ತಿ ಮಾಡಿರುವ 2.7 ದಶಲಕ್ಷ ಮೆಟ್ರಿಕ್ ಟನ್ ಅದಿರು ಅರಣ್ಯ ಪ್ರದೇಶದಲ್ಲಿದ್ದು, ಇವುಗಳ ವಿಲೇವಾರಿಗೆ ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಅಡಿ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಕಲ್ಲುಗಣಿ ಗುತ್ತಿಗೆದಾರರು ನಿಯಮಗಳ ಉಲ್ಲಂಘನೆ ಮಾಡಿರುವುದಕ್ಕೆ ವಿಧಿಸಿರುವ ದಂಡ ಸಂಗ್ರಹಿಸಲು OTS (One Time Settlement) ಯೋಜನೆ ಜಾರಿಗೆ ತರುವ ಕುರಿತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲು ಹೇಳಿದರು.
ಗಣಿ ಪರಿಸರ ಪುನಶ್ಚೇತನ ನಿಗಮದ ಸಭೆ: ಗಣಿಗಾರಿಕೆ ವಲಯಗಳ ಸಮಗ್ರ ಅಭಿವೃದ್ಧಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಹಾಗೂ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಬೈಲಾ ತಿದ್ದುಪಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವು ಗಣಿಬಾಧಿತ ಜಿಲ್ಲೆಗಳಲ್ಲಿ ಸುಪ್ರೀಂ ಕೋರ್ಟ್ ಅನುಮೋದನೆಯಂತೆ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಅಭಿವೃದ್ಧಿ ಯೋಜನೆಯ (CEPMIZ) ಕ್ರಿಯಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಪರಿಣಾಮಕಾರಿಯಾಗಿಸಲು ನಿಗಮದ ಬೈಲಾ ತಿದ್ದುಪಡಿ ಮಾಡಿ ಮುಖ್ಯಮಂತ್ರಿಯವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವಂತೆ ಸಿದ್ದರಾಮಯ್ಯ ಸೂಚಿಸಿದರು.
ಇಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿದರು. ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು- ಈ 4 ಜಿಲ್ಲೆಗಳ 466 ಗ್ರಾಮಗಳನ್ನು ಗಣಿ ಬಾಧಿತ ಎಂದು ಘೋಷಿಸಲಾಗಿದ್ದು, ಈ ಗ್ರಾಮಗಳ ಅಭಿವೃದ್ಧಿಗೆ ಸುಪ್ರೀಂ ಕೋರ್ಟು 24,996.71 ಕೋಟಿ ರೂ. ಅಂದಾಜು ವೆಚ್ಚದ ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಶ್ರೀ ಸುದರ್ಶನ ರೆಡ್ಡಿ ಅವರನ್ನು ಮೇಲುಸ್ತುವಾರಿ ಪ್ರಾಧಿಕಾರವಾಗಿ ನೇಮಕ ಮಾಡಲಾಗಿದ್ದು, ಯೋಜನೆಗಳ ಅನುಮೋದನೆ ಮತ್ತು ಅನುಷ್ಠಾನದ ಮೇಲುಸ್ತುವಾರಿಯನ್ನು ನೀಡಲಾಗಿದೆ. ಈ ಪ್ರಾಧಿಕಾರವು ಈ ವರೆಗೆ 4 ಜಿಲ್ಲೆಗಳಲ್ಲಿ ಒಟ್ಟು 7634.96 ಕೋಟಿ ರೂ. ಮೊತ್ತದ 317 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಉಳಿದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಅನುಮೋದನೆ ಪಡೆಯಲು ಅನುವಾಗುವಂತೆ ಈ ನಾಲ್ಕು ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಕೋಶವನ್ನು ಸ್ಥಾಪಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತ್ವರಿತವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು.
ಈ ಯೋಜನೆಯನ್ನು ಸದ್ಬಳಕೆ ಮಾಡುವ ಮೂಲಕ ಗಣಿಬಾಧಿತ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ವಿಪುಲ ಅವಕಾಶವಿದ್ದು, ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು. ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್ . ಮಲ್ಲಿಕಾರ್ಜುನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಡಾ.ಕೆ. ಗೋವಿಂದರಾಜು, ನಸೀರ್ ಅಹ್ಮದ್ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ. ಈ. ವಿ. ರಮಣ ರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: DCM D.K.Shivakumar: ಈ ವರ್ಷ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್