ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ 28ನೇ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಏಳು ದಿನಗಳ ಕಾಲ ನಡೆಯುವ ಜಾಂಬೋರೇಟ್ನಲ್ಲಿ ವಿವಿಧ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದ ಡಾ. ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ಎಲ್ಲಾ 25 ಜಿಲ್ಲೆಗಳಿಂದ 4,000 ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳು, 1000 ಕ್ಕೂ ಅಧಿಕ ಶಿಕ್ಷಕ ವರ್ಗದವರು ಭಾಗಿಯಾಗಿದ್ದಾರೆ. ಜೊತೆಗೆ ತಮಿಳುನಾಡು ಮತ್ತು ತೆಲಂಗಾಣ ರಾಜ್ಯದ ಪ್ರತಿನಿಧಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು. ಬಳಿಕ ಸೇನಾ ಇಲಾಖೆಯಿಂದ ಮೋಟಾರ್ ಬೈಕ್ ರೇಸ್, ಸಾಮೂಹಿಕ ಬ್ಯಾಂಡ್ ಪ್ರದರ್ಶನ ನಡೆಯಿತು.
ನಂತರ ಮಾತನಾಡಿದ ಸಿಎಂ, ದೊಡ್ಡಬಳ್ಳಾಪುರ, ಉಡುಪಿ ಸೇರಿದಂತೆ ಸ್ಕೌಟ್ ಗೈಡ್ಸ್ ಸಂಸ್ಥೆಯ ಪ್ರಗತಿಗಾಗಿ ರಾಜ್ಯ ಸರ್ಕಾರ ಪ್ರಥಮ ಹಂತವಾಗಿ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಆದ್ಯತೆ ಮೇರೆಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ರಾಜ್ಯಸಭಾ ಸದಸ್ಯ ಅಜೀತ್ ಜೈನ್ ಮಾತನಾಡಿ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ನಡೆಸಿದ ಸ್ವಚ್ಛತಾ ಕೆಲಸವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ.ರವಿ, ಪಿ.ಜಿ.ಆರ್.ಸಿಂಧ್ಯಾ ಸೇರಿದಂತೆ ಹಲವು ಅತಿಥಿಗಳು ಪಾಲ್ಗೊಂಡಿದ್ದರು.