ಬೆಂಗಳೂರು: ಸಚಿವರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನೌಪಚಾರಿಕ ಸಭೆ ನಡೆಸಿದರು. ಸಭೆಯಲ್ಲಿ ಅಧಿವೇಶನ ವೇಳೆ ಸರ್ಕಾರದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸಚಿವರು ಪಾಲ್ಗೊಂಡಿದ್ದು, ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಬಗ್ಗೆ ಸಮಾಲೋಚಿಸಲಾಯಿತು. ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ಕೊಡುವುದು ಸೇರಿದಂತೆ ಅನೇಕ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಹೀಗಾಗಿ ಕಲಾಪ ವೇಳೆ ಕಡ್ಡಾಯವಾಗಿ ಹಾಜರಿರುವಂತೆ ಸಿಎಂ ಸಚಿವರುಗಳಿಗೆ ಸೂಚನೆ ನೀಡಿದರು.
ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಅಧಿವೇಶನದ ವೇಳೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬೇಡ. ಯಾವುದೇ ಕಾರ್ಯಕ್ರಮವನ್ನು ನಿಗದಿಗೊಳಿಸಬೇಡಿ. ಇಲಾಖಾವಾರು ಪ್ರಗತಿ, ಅನುದಾನ ಬಳಕೆ ಬಗ್ಗೆ ನಿಗಾವಹಿಸಬೇಕು. ಜಿಲ್ಲಾ ಉಸ್ತುವಾರಿಗಳು ಜಿಲ್ಲೆಗಳಿಗೆ ಹೋಗಿ ಅಲ್ಲಿನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ಸಂಬಂಧ ಪ್ರತಿ 10 ದಿನಗಳಿಗೊಮ್ಮೆ ವರದಿ ಪಡೆದುಕೊಳ್ಳಿ ಎಂದು ಸೂಚನೆ ನೀಡಿದರು.
ಗೊಂದಲಕಾರಿ ಹೇಳಿಕೆಗಳನ್ನು ಯಾರೂ ನೀಡಬಾರದು. ಕೋರ್ಟ್ಗೆ ಮೊರೆಹೋದ ಸಚಿವರಿಗೆ ಪ್ರತಿಪಕ್ಷಗಳು ಪ್ರಶ್ನೆ ಕೇಳದೇ ಇದ್ದರೆ, ಆಡಳಿತ ಪಕ್ಷದವರೇ ಉಪಪ್ರಶ್ನೆಯನ್ನು ಕೇಳುವಂತೆ ಸೂಚಿಸಿದರು. ಇನ್ನೇನು ಉಪಚುನಾವಣೆ ಘೋಷಣೆಯಾಗಲಿದ್ದು, ಅದಕ್ಕೆ ಸಿದ್ಧರಾಗುವಂತೆ ಸಿಎಂ ಸಚಿವರುಗಳಿಗೆ ಸೂಚನೆ ನೀಡಿದರು. ಅಧಿವೇಶನ ಮುಗಿದ ಬಳಿಕ ಎಲ್ಲ ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳಬೇಕು. ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಬೇಕು ಎಂದು ತಿಳಿಸಿದರು.
ಓದಿ: ಸೋಮವಾರ ಸಚಿವರ ಜೊತೆ ಸಿಎಂ ಅನೌಪಚಾರಿಕ ಸಭೆ: ಸಿಡಿ ಪ್ರಕರಣ, ಮೀಸಲಾತಿ ಬಿಕ್ಕಟ್ಟು ಕುರಿತು ಚರ್ಚೆ ಸಾಧ್ಯತೆ