ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಆರ್ಥಿಕ ಸಂಕಷ್ಟ ತಲೆದೂರಿರುವ ಕಾರಣ ಹೆಲಿಕಾಪ್ಟರ್, ವಿಶೇಷ ವಿಮಾನ ಪ್ರಯಾಣ ಬಿಟ್ಟು ರಸ್ತೆ ಪ್ರಯಾಣ ಮಾಡುವ ನಿರ್ಧಾರದ ಮೂಲಕ ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.
ಸಚಿವರಿಗೂ ದುಂದು ವೆಚ್ಚ ಮಾಡದಂತೆ ಸಿಎಂ ಸೂಚಿಸಿದ್ದು, ಹೆಚ್ಚಾಗಿ ರಸ್ತೆ ಮೂಲಕವೇ ರಾಜ್ಯ ಪ್ರವಾಸ ಕೈಗೊಳ್ಳುವಂತೆ ಸಲಹೆ ನೀಡಿದ್ದು, ತಾವೂ ಅದನ್ನೇ ಪಾಲಿಸಲು ಮುಂದಾಗಿದ್ದಾರೆ. ದೂರದ ಪ್ರಯಾಣಕ್ಕೆ ಮಾತ್ರ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನ ಬಳಸಲು ಅವರು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಸ್ವಕ್ಷೇತ್ರದಿಂದ ಬೆಂಗಳೂರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಾರಿಗೆ ಬಸ್ಸಿನಲ್ಲಿ ಆಗಮಿಸಿದ್ದನ್ನು ಸಿಎಂ ಮೆಚ್ಚಿಕೊಂಡಿದ್ದು, ಸಾಧ್ಯವಾದಷ್ಟು ಬಸ್ಸು, ರೈಲುಗಳಲ್ಲಿ ಪ್ರಯಾಣಿಸಿ ಎಂದು ಸಲಹೆ ನೀಡಿರುವುದಾಗಿ ಸಿಎಂ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.