ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ನಿಧನಕ್ಕೆ ಸಿಎಂ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯವರೇ ಆದ ನಿ. ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಜಾರ್ಖಂಡ್ ಹಾಗೂ ಬಿಹಾರದ ರಾಜ್ಯಪಾಲರಾಗಿ, ರಾಜ್ಯಸಭಾ ಸದಸ್ಯರಾಗಿ, ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಸಲ್ಲಿಸಿರುವ ಸೇವೆ ಅನನ್ಯವಾದುದು. ಕಾನೂನು ತಜ್ಞರಾಗಿದ್ದ ಅವರು ರಚಿಸಿದ ಕೃತಿಗಳಲ್ಲಿ ದೇಶದ ಕಾನೂನು ವ್ಯವಸ್ಥೆ, ಸಂವಿಧಾನದ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿತ್ತು ಎಂದು ಸ್ಮರಿಸಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆ ವಾಸ ಅನುಭವಿಸಿದ್ದ ಜೋಯಿಸ್ ಅವರು ರಾಜ್ಯಸಭಾ ಸದಸ್ಯರಾಗಿ ಗಮನಸೆಳೆದಿದ್ದಾರೆ. ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಚಿಂತಕರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಕಂಬನಿ:
ನಿವೃತ್ತ ನ್ಯಾಯಮೂರ್ತಿ ರಾಮ ಜೋಯಿಸ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಮಾಜಿ ರಾಜ್ಯಪಾಲರು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಆದ ರಾಮ ಜೋಯಿಸ್ ಅವರು ರಾಜ್ಯಸಭೆ ಮಾಜಿ ಸದಸ್ಯರೂ ಆಗಿದ್ದಾರೆ. ರಾಷ್ಟ್ರೀಯ ಚಿಂತನೆಯನ್ನು ತಮ್ಮದಾಗಿಸಿಕೊಂಡಿದ್ದ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿ ಅವರೊಂದಿಗೆ ಸೆರೆವಾಸ ಅನುಭವಿಸಿದ್ದರು. ರಾಜನೀತಿಗೆ ಸಂಬಂಧಿಸಿ ಅವರ ಪುಸ್ತಕಗಳೂ ಪ್ರಕಟವಾಗಿವೆ. ಅವರ ನಿಧನದಿಂದ ಪಕ್ಷ ಮತ್ತು ದೇಶವು ಒಬ್ಬ ಉತ್ತಮ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ಅವರ ಕುಟುಂಬ, ಮಿತ್ರವೃಂದ, ಬಂಧುವರ್ಗಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಡಿಸಿಎಂ ಅಶ್ವತ್ಥ್ ನಾರಾಯಣ್ ಶೋಕ:
ನಿವೃತ್ತ ನ್ಯಾಯಮುರ್ತಿ ಹಾಗೂ ಮಾಜಿ ರಾಜ್ಯಪಾಲ ರಾಮಾಜೋಯಿಸ್ ಅವರ ನಿಧನ ಆಘಾತವನ್ನುಂಟು ಮಾಡಿದೆ ಹಾಗೂ ಶ್ರೇಷ್ಠ ಮಾರ್ಗದರ್ಶಕರನ್ನು ಕಳೆದುಕೊಂಡಂತೆ ಆಗಿದೆ ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಅವರು, ಅಪರೂಪದ ವ್ಯಕ್ತಿಯಾಗಿದ್ದರು, ಜ್ಞಾನಕೋಶವಾಗಿದ್ದರು. ಯಾವುದೇ ವಿಷಯದ ಬಗ್ಗೆ ಸಲಹೆ ಕೇಳಿದರೂ ಬಹಳ ಅಕ್ಕರೆ, ಪ್ರೀತಿಯಿಂದ ಹೇಳುತ್ತಿದ್ದರು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ, ಪಂಜಾಬ್ ಹೈಕೋರ್ಟ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಅನೇಕ ಮಹತ್ವದ ತೀರ್ಪುಗಳನ್ನು ಬರೆದಿದ್ದರು ಎಂದು ಸ್ಮರಿಸಿದ್ದಾರೆ.
ರಾಮಾ ಜೋಯಿಸ್ ಅವರು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಜತೆಗೆ, ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಹಾಗೂ ಅಗಲಿದ ಹಿರಿಯ ಚೇತನಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.