ಬೆಂಗಳೂರು: ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಜೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಹೊಸ ಮಾರ್ಗಸೂಚಿ ಅನುಷ್ಠಾನ ಸೇರಿದಂತೆ ಕೊರೊನಾ ನಿಯಂತ್ರಣ ಕುರಿತು ಸಚಿವರಿಗೆ ಹೆಚ್ಚಿನ ಜವಾಬ್ದಾರಿ ಹಂಚಿಕೆ ಮಾಡಲಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ ಮಣಿಪಾಲ್ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗುಣಮುಖನಾಗಿ ಬಂದಿದ್ದೇನೆ. ಇಂದು ಸಂಜೆ 4 ಗಂಟೆಗೆ ಸಚಿವ ಸಂಪುಟದ ಸಭೆ ಕರೆದಿದ್ದೇನೆ. ಕೊರೊನಾ ನಿಯಂತ್ರಣಕ್ಕೆ ಸಚಿವರು ಏನೇನು ಮಾಡಬೇಕು ಎಂದು ಸೂಚನೆ ಕೊಡಲಿದ್ದೇನೆ ಎಂದರು.
ಆಸ್ಪತ್ರೆಯಿಂದಲೇ ಇಷ್ಟು ದಿನ ನಾನು ನಿರಂತರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಸಚಿವರು ಹಾಗೂ ಇತರ ಸಚಿವರ ಜೊತೆ ಸಂಪರ್ಕದಲ್ಲಿದ್ದೆ. ಎಲ್ಲರ ಜೊತೆ ಚರ್ಚೆ ಮಾಡಿ ವಾಸ್ತವ ಸ್ಥಿತಿಯನ್ನು ತಿಳಿದುಕೊಂಡು ಬಿಗಿಯಾದ ಕ್ರಮಕ್ಕೆ ಈಗಾಗಲೇ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ಇಂದು ಸಚಿವರಿಗೆ ಕೆಲ ಸೂಚನೆ ನೀಡಲಾಗುತ್ತದೆ ಎಂದರು.
ಓದಿ : ಕೊರೊನಾದಿಂದ ಸಿಎಂ ಬಿಎಸ್‌ವೈ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದೆ. ಒಂದು ಮನೆಯಲ್ಲಿ ಮೂರು ನಾಲ್ಕು ಜನರಿಗೆ ಕೊರೊನಾ ಬರುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಇದಕ್ಕೆಲ್ಲಾ ಪರಿಹಾರ ಒಂದೇ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ತಡೆಯಲು ಇದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ. ಹಾಗಾಗಿ, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಜನರಿಗೆ ಕರೆ ನೀಡಿದರು.
ರಾಜ್ಯದ ಜನರಿಗೆ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ. ಅನಗತ್ಯವಾಗಿ ಓಡಾಡಬೇಡಿ. ಈಗಾಗಲೇ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದ್ದೇವೆ. ಹಾಗಾಗಿ, ಇನ್ನಾದರೂ ಅನಗತ್ಯವಾಗಿ ಮನೆಯಿಂದ ಹೊರ ಬರುವುದನ್ನು ನಿಲ್ಲಿಸಿ. ಈಗಾಗಲೇ ನಾವು ಬಹಳ ಬಿಗಿ ಕ್ರಮ ಕೈಗೊಂಡಿದ್ದೇವೆ. ಕಠಿಣ ಮಾರ್ಗಸೂಚಿ ಜಾರಿ ಮಾಡಿದ್ದೇವೆ. ನಮಗೆ ಸಹಕಾರ ಕೊಡಿ. ಅನಗತ್ಯವಾಗಿ ಮಾರ್ಗಸೂಚಿ ಉಲ್ಲಂಘಿಸಿ ಪೊಲೀಸರಿಗೆ ದಂಡ ವಿಧಿಸಲು ಅವಕಾಶ ಕೊಡಬಾರದು. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿದರು. ಕೊರೊನಾ ನೆಗೆಟಿವ್ ವರದಿ ನಕಲಿಯಾಗಿ ಕೊಡುತ್ತಿರುವ ಆರೋಪವನ್ನು ಸಿಎಂ ತಳ್ಳಿಹಾಕಿದರು. ಸುಮ್ಮನೆ ಅಂತಹ ಸುದ್ದಿಗಳನ್ನು ಮಾಡುತ್ತಾರೆ ಎಂದರು.