ಬೆಂಗಳೂರು: ಕರ್ನಾಟಕ ಹಾಗೂ ಯುಕೆ ಹೂಡಿಕೆ ಒಪ್ಪಂದಗಳ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಬದಲಾವಣೆ ಮೊದಲಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಇಂದು ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಕುರಿತು ಚರ್ಚೆ ನಡೆಸಿದರು. ಆರೋಗ್ಯ, ಶಿಕ್ಷಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪರಸ್ಪರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವ ಕುರಿತು ಚರ್ಚೆ ನಡೆಸಿದರು.
ಬೆಂಗಳೂರು ಸಂಚಾರ ನಿರ್ವಹಣೆ, ಯುಕೆ ಸಹಯೋಗ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಸಂದರ್ಭದಲ್ಲಿ ಪಠ್ಯಕ್ರಮ ರೂಪಿಸುವ ನಿಟ್ಟಿನಲ್ಲಿಯೂ ಯುಕೆ ಸಹಯೋಗ ಪಡೆಯಲು ಇರುವ ಅವಕಾಶಗಳು, ಕರ್ನಾಟಕ ಯುಕೆಯೊಂದಿಗೆ ಹೂಡಿಕೆ ಒಪ್ಪಂದಗಳ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಬದಲಾವಣೆ ಮೊದಲಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಉಭಯ ನಾಯಕರು ಸಮ್ಮತಿ ವ್ಯಕ್ತಪಡಿಸಿದರು.
ಕರ್ನಾಟಕ ಅತ್ಯಂತ ಪ್ರಗತಿ ಪರ ರಾಜ್ಯವಾಗಿದ್ದು, ಹೂಡಿಕೆಗೆ ಅತ್ಯುತ್ತಮ ಪೂರಕ ವಾತಾವರಣ ಹೊಂದಿದೆ. ಕೈಗಾರಿಕೋದ್ಯಮಗಳ ಸ್ಥಾಪನೆಗೆ ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ತಂತ್ರಜ್ಞಾನ, ಶಿಕ್ಷಣದಲ್ಲಿ ಮುನ್ನಡೆ ಸಾಧಿಸಿರುವ ರಾಜ್ಯವಾಗಿದ್ದು, ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನೂ ಹೊಂದಿದೆ. ಯುಕೆ ಮೂಲದ ಹಲವು ಪ್ರತಿಷ್ಠಿತ ಕಂಪನಿಗಳು ನೆಲೆಸಿದ್ದು, ಇಲ್ಲಿ ಗಣನೀಯವಾಗಿ ಹೂಡಿಕೆ ಮಾಡಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಓದಿ: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್
ಆರೋಗ್ಯ, ಸಂಸ್ಕೃತಿ, ಭಾಷಾ ವಿಷಯಗಳು ಹೀಗೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಬಹುರಾಷ್ಟ್ರೀಯ ಕಂಪನಿಗಳ 80ಕ್ಕೂ ಹೆಚ್ಚು ಹೈ-ಟೆಕ್ ಸಂಶೋಧನಾ ಸಂಸ್ಥೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪೂರ್ವದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರ ದೇಶ, ವಿದೇಶಗಳ ಜನರಿಗೆ ನೆಲೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಜೆರೆಮಿ ಬೆಡ್ ಫೋರ್ಡ್, ಸಚಿವರಾದ ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ. ಪೊನ್ನುರಾಜ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.