ಬೆಂಗಳೂರು: ಕನ್ನಡದ ಗಡಿ ರಕ್ಷಣೆಗೆ ರಾಜ್ಯ ಸರ್ಕಾರ ಸಶಕ್ತವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಬಗ್ಗೆ ವಾದ ಮಂಡಿಸಲು ಅತ್ಯಂತ ಬಲಿಷ್ಠ ವಕೀಲರ ತಂಡವನ್ನು ರಚನೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಕುರಿತಂತೆ ನ.23ರಂದು ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ನಡೆಸಲಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಈಗಾಗಲೇ ಸರ್ವಪಕ್ಷಗಳ ನಿಯೋಗ ಕರೆದು ಉನ್ನತ ಮಟ್ಟದ ಸಭೆ ಮಾಡಿದ್ದಾರೆ. ಈ ಸಭೆಯ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಕಳೆದ ರಾತ್ರಿ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದರು.
ಈ ಸಭೆಯ ಬಳಿಕ ಮಾತನಾಡಿದ ಅವರು, ಹಿರಿಯ ವಕೀಲರು ಮತ್ತು ಸಚಿವರೊಂದಿಗೆ ಸಭೆ ಮಾಡಿದ್ದೇವೆ. ರಾಜ್ಯದ ಪರ ವಾದಿಸಲು ಹಿರಿಯ ವಕೀಲರ ತಂಡ ರಚಿಸಿದ್ದು, ಇದರಲ್ಲಿ ಮುಕುಲ್ ರೋಟಗಿ, ಶ್ಯಾಂ ದಿವಾನ್, ಉದಯ್ ಹೊಳ್ಳ, ಬೆಳಗಾವಿಯ ಮಾರುತಿ ಜಿರ್ಲೆ, ವಕೀಲ ರಘುಪತಿ ಸೇರಿದಂತೆ ಹಲವರಿದ್ದಾರೆ. ಈ ತಂಡವು ಈಗಾಗಲೇ ಎರಡು ಮೂರು ಬಾರಿ ಸಭೆ ನಡೆಸಿದ್ದು, ನ್ಯಾಯಾಲಯದಲ್ಲಿ ಏನು ವಾದ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದರು.
ಗಡಿ ವಿಚಾರವಾಗಿ ಮಹಾರಾಷ್ಟ್ರದಿಂದ ಸಲ್ಲಿಸಲಾದ ಅರ್ಜಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಇದನ್ನು ಪರಿಗಣಿಸಬಾರದು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ನಮ್ಮ ವಕೀಲರ ತಂಡ ಸಿದ್ದವಾಗಿದೆ. ಮಂಗಳವಾರ ಸಂಜೆ ವಕೀಲರೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದು, ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕರು ಹಾಗೂ ಎಲ್ಲಾ ಪಕ್ಷದ ನಾಯಕರಿಗೆ ಪತ್ರವನ್ನು ನಾಳೆ ಬೆಳಗ್ಗೆ ಕಳುಹಿಸಿಕೊಡಲಾಗುತ್ತಿದೆ ಸಿಎಂ ಹೇಳಿದರು.
ಮಹಾರಾಷ್ಟ್ರಕ್ಕೆ ಗಡಿ ವಿವಾದ ರಾಜಕೀಯ ವಸ್ತು: ಮಹಾರಾಷ್ಟ್ರದಲ್ಲಿ ಗಡಿ ವಿವಾದವೇ ರಾಜಕೀಯ ವಸ್ತುವಾಗಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಎಲ್ಲಾ ಪಕ್ಷಗಳು ಕೂಡ ತಮ್ಮ ರಾಜಕೀಯ ಕಾರಣಕ್ಕಾಗಿ ಇದನ್ನು ಎತ್ತುವ ಕೆಲಸ ಮಾಡುತ್ತಿವೆ. ಈವರೆಗೂ ಅವರು ಯಶಸ್ವಿಯಾಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗಡಿ ಉಸ್ತುವಾರಿಗೆ ಮತ್ತೆ ಇಬ್ಬರು ಸಚಿವರನ್ನು ನೇಮಿಸಿದ ಮಹಾ ಸರ್ಕಾರ