ಹಾವೇರಿ: ಸಾವರ್ಕರ್ ಬಗ್ಗೆ ಮಾಜಿ ಪ್ರಧಾನಿ ದಿ. ಇಂಧಿರಾ ಗಾಂಧಿ ದೇಶದ ಶ್ರೇಷ್ಠ ಪುತ್ರ ಎಂದಿದ್ದು ದಾಖಲೆಗಳಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಾವರ್ಕರ್ ವಿಚಾರವಾಗಿ ಪರ ವಿರೋಧ ಹೇಳಿಕೆ, ಗಲಾಟೆ ಹಿನ್ನೆಲೆ ಸಿಎಂ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಗೊಂದಲ ಸೃಷ್ಟಿ ಮಾಡಬಾರದು. ಒಂದು ವರ್ಗಕ್ಕೆ ನೋವುಂಟು ಮಾಡಬಾರದು. ಟಿಪ್ಪು ಸುಲ್ತಾನ್ ಬಗ್ಗೆ ಕಾಂಟ್ರೋವರ್ಸಿ ಇದೆ. ಸಾಮಾಜಿಕವಾಗಿ ಶಾಂತಿಯಿಂದ ಇರಬೇಕು. ದೇಶದಲ್ಲಿನ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದರ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ತಿಳಿಸಿದರು.
ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಿಎಂ, ಅವರ ಆಡಳಿತವನ್ನು ಜನರು ನೋಡಿ ತಿರಸ್ಕಾರ ಮಾಡಿದ್ದಾರೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ದೇಶದಲ್ಲಿ ಭ್ರಷ್ಟಾಚಾರ ಆರಂಭಿಸಿದ್ದೇ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ಆರೋಪಿಸಿದರು. ನೆಲ, ಜಲ ಏನನ್ನೂ ಬಿಡಲಿಲ್ಲ. ಇದನ್ನೆಲ್ಲ ಮಾಡಿದ್ದಕ್ಕೆ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಅವರು ಸಿದ್ದರಾಮೋತ್ಸವ ಮಾಡಿದರು. ನಾವು ಜನೋತ್ಸವ ಮಾಡ್ತಿದ್ದೇವೆ. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆಂದು ಟಾಂಗ್ ಕೊಟ್ಟರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಪಂಚಮಸಾಲಿಪೀಠ ಶ್ರೀಗಳು ಗಡುವು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತಂತೆ ಗುರುಗಳ ಜೊತೆ ಮಾತನಾಡುವುದಾಗಿ ತಿಳಿಸಿದರು. ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಬೊಮ್ಮಾಯಿ, ಅದು ಪಕ್ಷದ ಆಂತರಿಕ ವಿಚಾರ. ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಕೊಡಗಿನಲ್ಲಿ ಅಶಾಂತಿಯ ವಾತಾವರಣ
ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿನ ನೆರೆ ಹಾನಿ ವೀಕ್ಷಣೆ ತೆರಳಿದ್ದರು. ಈ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ಗೆ ಜೀವ ಬೆದರಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ. ಸಂಪತ್ ಹೇಳಿಕೆಯನ್ನೂ ತನಿಖೆ ನಡೆಸುತ್ತೇವೆ. ಸಿದ್ದರಾಮಯ್ಯರಿಗೂ ಜೀವ ಬೆದರಿಕೆ ಅಂತಾ ಸುದ್ದಿ ಮಾಡಿದ್ರಿ. ಆ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.