ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅವಸರದಲ್ಲಿ ಮತ್ತು ತುರ್ತಾಗಿ ಯಾವುದೇ ದೇವಸ್ಥಾನಗಳನ್ನ ತೆರವು ಕಾರ್ಯಾಚರಣೆ ನಡೆಸದಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ನಂತರ ದೇವಾಲಯಗಳ ತೆರವು ವಿಚಾರದಲ್ಲಿ ಸ್ಪಷ್ಟ ಆದೇಶ ಹೊರಡಿಸಲಾಗುತ್ತದೆ ಎಂದಿದ್ದಾರೆ.
ಸೆಪ್ಟೆಂಬರ್ 17ರಂದು ಆಯೋಜಿಸಿರುವ ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಿವರಗಳನ್ನ ಸದನದಲ್ಲಿ ಹೇಳುತ್ತೇನೆ.
ಆದರೆ, ದೇವಾಲಯ ಕಟ್ಟಡ ಒಡೆದ ಕುರಿತು ಈಗಾಗಲೇ ಹೇಗೆ ಒಡೆದಿದ್ದೀರಿ?. ತರಾತುರಿ ಕ್ರಮ ಯಾಕೆ ಕೈಗೊಂಡಿರಿ?, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯದೇ ತೆರವು ಮಾಡಿದ್ದು ಏಕೆ? ಎನ್ನುವುದರ ಬಗ್ಗೆ ಕಾರಣ ಕೇಳಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದರು.
ಎರಡು ಮೂರು ದಿನದಲ್ಲಿ ಸಚಿವ ಸಂಪುಟ ಸಭೆ ಕರೆದು ಚರ್ಚೆ ಮಾಡಿ ನಂತರ ದೇವಾಲಯ ತೆರವು ವಿಚಾರದಲ್ಲಿ ಸ್ಪಷ್ಟ ಆದೇಶ ಹೊರಡಿಸುತ್ತೇವೆ ಎಂದರು. ಸೆಪ್ಟೆಂಬರ್ 17ರಂದು ರಾಜ್ಯದಲ್ಲಿ ಲಸಿಕಾ ಅಭಿಯಾನ ಮಾಡಲು ನಿರ್ಧರಿಸಿದ್ದೇವೆ.
ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಮಾಡುತ್ತೇವೆ. ಲಸಿಕೆ ಹಾಕಿಸಲು ಡಿಸಿಯವರನ್ನ ವಿಸಿ ಮಾಡಿದ್ದೇವೆ. ಬೇರೆ ಬೇರೆ ದಿನಾಂಕದಂದು ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಸಚಿವರು ಎಲ್ಲೆಲ್ಲಿ ಇರುತ್ತಾರೋ ಅಲ್ಲಿ ಅಭಿಯಾನ ಮಾಡುತ್ತೇವೆ. ನಾನು ಅಂದು ಗುಲ್ಬರ್ಗಾದಲ್ಲಿ ಇರುತ್ತೇನೆ. ಅಲ್ಲಿ ಭಾಗಿಯಾಗುತ್ತೇನೆ.
ಸಾಧ್ಯವಾದಷ್ಟು ಹೆಚ್ಚು ಲಸಿಕೆ ನೀಡಬೇಕು ಅಂತಾ ಉದ್ದೇಶವಿದೆ. 30 ಲಕ್ಷ ಲಸಿಕೆ ಗುರಿ ಇರಿಸಿಕೊಂಡಿದ್ದೇವೆ. ಇದು ದೊಡ್ಡ ಸವಾಲು. ಸದ್ಯ 10-12 ಲಕ್ಷ ಲಸಿಕೆ ಮಾತ್ರ ದಿನವೊಂದಕ್ಕೆ ಕೊಡಲಾಗುತ್ತಿದೆ. ಮೂರು ಪಟ್ಟು ಹೆಚ್ಚಿಸುವ ಸವಾಲಿನಲ್ಲಿ ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.