ಬೆಂಗಳೂರು: ನಮಗೆ ಆಪತ್ಕಾಲದಲ್ಲಿ ಕೈ ಹಿಡಿದವರು ಎಂಟಿಬಿ, ಈಗ ನಾವು ಅವರನ್ನು ಕೈಬಿಟ್ಟಲ್ಲಿ ಮಾತು ತಪ್ಪಿದಂತಾಗುತ್ತದೆ. ಕಷ್ಟಕಾಲದಲ್ಲಿ ನಮ್ಮೊಂದಿಗೆ ಬಂದವರನ್ನು ಈಗ ನಾವು ಕೈ ಹಿಡಿಯಬೇಕು ಎಂದು ಶರತ್ ಬಚ್ಚೇಗೌಡ ಬೆಂಬಲಿಗರಿಗೆ ಸಿಎಂ ಮನವರಿಕೆ ಮಾಡಿದ್ದಾರೆ.
ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ್ದ ಶರತ್ ಬಚ್ಚೇಗೌಡ ಬೆಂಬಲಿಗರ ನಿಯೋಗ ಹೊಸಕೋಟೆ ಟಿಕೆಟ್ ಸಂಬಂಧ ಮಾತುಕತೆ ನಡೆಸಿತು. ಈ ವೇಳೆ ಸಿಎಂ, ಶರತ್ ಬಚ್ಚೇಗೌಡ ಬೆಂಬಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಎಂಟಿಬಿ ನಾಗರಾಜ್ ಜೊತೆ ನಿಲ್ಲಬೇಕು, ಉಪಚುನಾವಣೆ ಟಿಕೆಟ್ ಎಂಟಿಬಿ ಅವರಿಗೆ ನೀಡಲು ತೀರ್ಮಾನವಾಗಿದೆ. ನೀವು ಅವರ ಜೊತೆಗೂಡಿ ಕೆಲಸ ಮಾಡಿ ಎಂಟಿಬಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು. ಸುಮ್ಮನೆ ಗಲಾಟೆ ಮಾಡುವುದು ಸರಿಯಲ್ಲ. ಪಕ್ಷ ಅಧಿಕಾರಕ್ಕೆ ಬಂದಿದೆ, ಅನರ್ಹರ ರಾಜೀನಾಮೆಯಿಂದ ಸರ್ಕಾರ ರಚನೆಯಾಗಿದೆ. ಅವರನ್ನ ನಾವು ಕೈಹಿಡಿಬೋಕೋ ಬೇಡವೋ ಅಂತ ಬೆಂಬಲಿಗರನ್ನು ಸಿಎಂ ಪ್ರಶ್ನಿಸಿದರು.
ಆದ್ರೆ ಯಡಿಯೂರಪ್ಪ ಮಾತಿಗೆ ಬೇರೆಯೇ ದಾಟಿಯಲ್ಲಿ ಉತ್ತರಿಸಿದ ಬೆಂಬಲಿಗರು ಎಂಟಿಬಿ ನಾಗರಾಜ್ ಅವರನ್ನ ಎಂಎಲ್ಸಿ ಮಾಡಿ, ಸಚಿವ ಸ್ಥಾನ ಕೊಟ್ಟರೆ ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಎಂಎಲ್ಎ ಟಿಕೆಟ್ ಶರತ್ ಬಚ್ಚೇಗೌಡರಿಗೆ ನೀಡಬೇಕು. ಇಷ್ಟು ವರ್ಷಗಳಿಂದ ಪಕ್ಷ ಸಂಘಟನೆಯನ್ನ ನಾವು ಮಾಡಿದ್ದೇವೆ. ಅದಕ್ಕಾಗಿ ಬಹಳಷ್ಟು ತೊಂದರೆಯನ್ನ ನಾವು ಅನುಭವಿಸಿದ್ದೇವೆ. ಈಗ ಏಕಾಏಕಿ ಎಂಟಿಬಿಗೆ ಟಿಕೆಟ್ ನೀಡುವುದರಿಂದ ನಮ್ಮ ಅಸ್ಥಿತ್ವ ಹೋಗುತ್ತದೆ ಎಂದು ಸಿಎಂಗೆ ಶರತ್ ಬಚ್ಚೇಗೌಡ ಬೆಂಬಲಿಗರು ಮನವಿ ಮಾಡಿದರು.
ಇದಕ್ಕೆ ಸಿಎಂ ಬಿಎಸ್ವೈ ಸಮ್ಮತಿ ನೀಡದೇ ಇರುವುದಕ್ಕೆ ಅಸಮಧಾನಗೊಂಡ ಸಂಸದ ಬಚ್ಚೇಗೌಡರ ಸಹೋದರ ಗೋಪಾಲಗೌಡ, ಈ ಬಾರಿ ನಿಮ್ಮ ಅಭ್ಯರ್ಥಿ ಸೋಲುವುದು ಖಚಿತ. ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸಬೇಡಿ, ನಮ್ಮ ಪಕ್ಷಕ್ಕೆ, ಕಾರ್ಯಕರ್ತರಿಗೆ ನೋವುಂಟು ಮಾಡಿದವರಿಗೆ ಬೆಲೆ ಕೊಡಿ. ಇದನ್ನು ಆ ದೇವರು ಒಪ್ಪುವುದಿಲ್ಲ, ಈಗ ನಿಮ್ಮ ಜೊತೆ ಇರುವವರು ನಮ್ಮ ಕಾರ್ಯಕರ್ತರ ಮೇಲೂ ಕೇಸ್ ಹಾಕಿಸಿದ್ದಾರೆ. ನಮಗೆ ತೊಂದರೆ ಕೊಟ್ಟವರಿಗೆ ಈ ಬಾರಿ ಪಾಠ ಕಲಿಸುತ್ತೇನೆ ನೋಡ್ತಿರಿ ಎಂದು ಹೇಳಿ ಬಂದಿದ್ದಾರೆ ಎನ್ನಲಾಗ್ತಿದೆ.
ಅಲ್ಲದೆ ಈ ಬಾರಿ ಶರತ್ ಬಚ್ಚೇಗೌಡ ಕೂಡ ಸ್ಪರ್ಧಿಸೋದು ಮತ್ತು ಅವನು ಗೆಲ್ಲೋದು ಕೂಡ ಸತ್ಯ ಎಂದು ಸಿಎಂಗೆ ಸ್ಪಷ್ಟವಾಗಿ ಹೇಳಿ ನಿವಾಸದಿಂದ ಹೊರನಡೆದರು ಎಂದು ತಿಳಿದುಬಂದಿದೆ. ಹೊಸಕೋಟೆ ಗದ್ದಲದಿಂದ ತುಸು ಕಸಿವಿಸಿಗೊಂಡ ಸಿಎಂ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಗಮಿಸಿದರು.