ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಇನ್ನೇನು ಕೊರೊನಾ ಭೀತಿ ಕಡಿಮೆ ಆಯ್ತು ಅಂತ ಅಂದುಕೊಳ್ಳುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಪ್ರಕರಣಗಳು ಆಗಮಿಸಿ ಆತಂಕ ಹೆಚ್ಚು ಮಾಡುತ್ತಿದೆ. ಪಾದರಾಯನಪುರ, ಶಿವಾಜಿನಗರದಲ್ಲಿ ಮೂಡಿಸಿದ್ದ ಆತಂಕ ಇದೀಗ ಚಿಕ್ಕಪೇಟೆ ಏರಿಯಾದಲ್ಲಿ ಶುರುವಾಗಿದೆ.
ಚಿಕ್ಕಪೇಟೆಯಲ್ಲಿ ತರಕಾರಿ ಮಾರುವವರಿಂದ ಹಿಡಿದು ವೈದ್ಯರ ತನಕ ಕೊರೊನಾ ಹರಡಿದೆ. ಅಷ್ಟೇ ಅಲ್ಲದೇ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಇಲ್ಲಿಯವರೆಗೆ 21 ಕೇಸ್ ದಾಖಲಾಗಿದ್ದು, ಹೂವಿನ ವ್ಯಾಪಾರಿಗೆ, ತರಕಾರಿ ಮಾರುವ ಮಹಿಳೆಗೆ ಕೊರೊನಾ ಬಂದಿದ್ದು, ಮಹಿಳೆಯನ್ನ ಬಲಿ ಪಡೆದಿದೆ.
ಇನ್ನು ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ವೈದ್ಯನಿಗೂ ಕೊರೊನಾ ಬಂದಿದ್ದು, ಇಡೀ ವೈದ್ಯನ ಕುಟುಂಬವನ್ನೇ ಕೊರೊನಾ ಆವರಿಸಿದೆ. ಪದ್ಮನಾಭನಗರದ ನಿವಾಸಿಯೊಬ್ಬರು ಚಿಕ್ಕಪೇಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಅವರಿಗೂ ಸೋಂಕು ತಗುಲಿದೆ. ಬಟ್ಟೆ ವ್ಯಾಪಾರಿ, ಬೀದಿ ಬದಿಯ ವ್ಯಾಪಾರಿಗೂ ಸೋಂಕು ತಗುಲಿದ್ದು ಆತಂಕ ಹೆಚ್ಚಿಸಿದೆ.
ಇನ್ನು ಚಿಕ್ಕಪೇಟೆಯಲ್ಲಿ ಸೋಂಕು ಹೆಚ್ಚಳಕ್ಕೆ ವಿಕ್ಟೋರಿಯಾ ಎಪಿಕ್ ಸೆಂಟರ್ ಕಾರಣವಾಯಿತಾ ಎಂಬ ಪ್ರಶ್ನೆ ಕಾಡುತ್ತಿದೆ. ವಿಕ್ಟೋರಿಯಾದಲ್ಲಿ ಕರ್ತವ್ಯ ನಿರ್ವಹಿಸುವ ಬಹುತೇಕರು ಚಿಕ್ಕಪೇಟೆಯ ಆಸುಪಾಸಿನಲ್ಲಿ ವಾಸವಾಗಿದ್ದಾರೆ. ಅಲ್ಲದೇ ಸೋಂಕು ಪತ್ತೆಯಾದ ಬಳಿಕ ಸರಿಯಾಗಿ ಕಂಟೇನ್ಮೆಂಟ್ ಝೋನ್ನಲ್ಲಿ ಸೋಂಕು ನಿವಾರಣಾ ಔಷಧ ಸಿಂಪಡಿಸಿಲ್ಲ ಎಂಬ ಆರೋಪ ಕೂಡ ಇದೆ. ಸದ್ಯ ಚಿಕ್ಕಪೇಟೆ ಬಂದ್ ಮಾಡದೇ ಇದ್ದರೆ ಬೆಂಗಳೂರಿಗೆ ದೊಡ್ಡ ಅಪಾಯವೇ ಇದೆ.