ಬೆಂಗಳೂರು: ರಾಜ್ಯದಲ್ಲಿ ಪರಿಣಾಮಕಾರಿಯಾದ ಹೊಸ ಯುವ ಕಾರ್ಯನೀತಿ ರೂಪಿಸಲು ಉನ್ನತ ಮಟ್ಟದಲ್ಲಿ ಸಮಾಲೋಚನೆಗಳು ನಡೆಯುತ್ತಿವೆ. ಯುವಜನರ ಕ್ರಿಯಾಶೀಲತೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
'ವಿವೇಕಾನಂದರು ಯುಗಪುರುಷರಾಗಿದ್ದರು. ಅವರು ದೇಶದ ಯುವಸಮೂಹದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಅವರ ಚಿಂತನೆಗಳಿಗೆ ತಕ್ಕಂತೆ ಸರಕಾರವು ಯುವಜನರ ಭವಿಷ್ಯ ರೂಪಿಸಲಿದೆ' ಎಂದು ಸಿಎಂ ಭರವಸೆ ನೀಡಿದರು.
'ಸ್ವತಃ ನಾನು ವಿವೇಕಾನಂದರ ವಿಚಾರಗಳ ವಿದ್ಯಾರ್ಥಿಯಾಗಿದ್ದೇನೆ. ಅವರದ್ದು ಕಾಲ ಮತ್ತು ದೇಶಗಳನ್ನು ಮೀರಿದ ಚಿಂತನೆಗಳಾಗಿದ್ದವು. ಪ್ರತಿದಿನವೂ ಹೊಸ ಹಾದಿಯಲ್ಲಿ ಅವರು ಮುನ್ನಡೆಯುತ್ತಿದ್ದರು. ಮನುಷ್ಯ ಭೌತಿಕವಾಗಿ ಕಣ್ಮರೆಯಾದರೂ ಚಿರಂತನವಾಗಿ ಹೇಗೆ ಬದುಕಬಹುದು? ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಸಿಎಂ ಬಣ್ಣಿಸಿದರು.
'ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರಂತಹ ಆಧ್ಯಾತ್ಮಿಕ ಅನುಭಾವಿ ಗುರುವಾಗಿ ಸಿಕ್ಕಿದರು. ತಮ್ಮ ಶಿಷ್ಯನಿಗೆ ಪರಮಹಂಸರು ಒಳ್ಳೆಯ ಹೆಸರನ್ನೇ ಇಟ್ಟರು. ಎಲ್ಲೆಲ್ಲಿ ವಿವೇಕ ಇರುತ್ತದೆಯೋ ಅಲ್ಲೆಲ್ಲ ಆನಂದವಿರುತ್ತದೆ. ಇದು ವಿವೇಕಾನಂದರಿಗೆ ಅನ್ವರ್ಥವಾಗಿದೆ’ ಎಂದು ಬೊಮ್ಮಾಯಿ ವ್ಯಾಖ್ಯಾನಿಸಿದರು.
ನಮ್ಮ ಸರ್ಕಾರ ಯುವ ಜನರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಯುವ ಶಕ್ತಿ ದೇಶದ ಶಕ್ತಿ. ಯುವಜನತೆಯಲ್ಲಿರುವ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವರಿಗೆ ಸೂಕ್ತ ಅವಕಾಶ, ವೇದಿಕೆ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯ. ಇಂದಿನ ಕಾಲಮಾನಕ್ಕೆ ತಕ್ಕಂತೆ ಹೊಸ ಯುವ ನೀತಿ ಅಗತ್ಯವಿದ್ದು, ಹೊಸ ಯುವ ನೀತಿ ರೂಪಿಸುವುದಕ್ಕಾಗಿ ಡಾ. ಆರ್.ಬಾಲ ಸುಬ್ರಹ್ಮಣ್ಯಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಎರಡು ತಿಂಗಳಲ್ಲಿ ವರದಿಯನ್ನು ಪಡೆದು ಹೊಸ ಯುವ ನೀತಿಯನ್ನು ಜಾರಿಗೊಳಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಎರಡೂವರೆ ಕೋಟಿ ಯುವ ಜನತೆಯನ್ನು ತಲುಪಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಪ್ತಾಹವನ್ನು ಯಶಸ್ವಿಗೊಳಿಸಿ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.
ಯುವ ಶಕ್ತಿ ದೇಶದ ಶಕ್ತಿ. ಯುವಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಕರ್ತವ್ಯ. ರಾಜ್ಯ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಜನವರಿ 12 ರಿಂದ 18 ವರೆಗೂ ಯುವ ಸಂಸದ್, ಯುವ ಗ್ರಾಮ ಸಭೆ, ಯುವ ವಾರ್ಡ್ ಸಭೆ ಸೇರಿದಂತೆ ಪ್ರತಿದಿನ ಯುವ ಸಮುದಾಯಕ್ಕೆ ನೆರವಾಗುವ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಮಾದಕ ವ್ಯಸನ, ಮಹಿಳಾ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳ ತಡೆಗಟ್ಟುವ ಬಗ್ಗೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲಾಗುತ್ತದೆ. ಸರ್ಕಾರದಿಂದ ಯುವ ಸಮುದಾಯಕ್ಕೆ ಸುಮಾರು 540 ಯೋಜನೆಗಳಿದ್ದು ಈ ಸಪ್ತಾಹದಲ್ಲಿ ಅವುಗಳ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದರು.
ಶಿಕ್ಷಣ ಬಹಳ ಮುಖ್ಯ. ಎನ್‌ಇಪಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ನಮ್ಮ ಕರ್ನಾಟಕ. ಪರಿಪೂರ್ಣ ಶಿಕ್ಷಣ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಿ ಕ್ರಾಂತಿಕಾರಕ ಬದಲಾವಣೆಗೆ ಹೆಜ್ಜೆ ಇಡಲಾಗಿದೆ. ಆವಿಷ್ಕಾರ, ತಂತ್ರಜ್ಞಾನ, ನಾವಿನ್ಯತೆಗೆ ಕರ್ನಾಟಕ ಹೆಸರುವಾಸಿಯಾಗಿದೆ. ಶಿಕ್ಷಣದ ಗುಣಮಟ್ಟದ ಕೊರತೆಯಿದ್ದು, ಶಿಕ್ಷಣದ ಗುಣಮಟ್ಟ 10 ಪಟ್ಟು ಹೆಚ್ಚಿಸಲಾಗುತ್ತದೆ. ವಿದ್ಯಾರ್ಥಿಗಳ ಕನಸಿನ ಉದ್ಯೋಗ ಪಡೆಯಲು ಏನ್ ಮಾಡಬೇಕು ಅನ್ನೋದನ್ನ ತಿಳಿಸಿ, ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಸಚಿವ ಡಾ.ಸಿಎನ್ ಅಶ್ವಥ್ ನಾರಾಯಣ್ ಹೇಳಿದರು.
ಇದೆ ವೇಳೆ ಯುವ ಜನರಿಗೆ ಸಂಬಂಧಿಸಿದಂತೆ ಸರ್ಕಾರದಿಂದ 540 ಯೋಜನೆಗಳಿದ್ದು, ಅವುಗಳ ಬಗ್ಗೆ ಮಾಹಿತಿ ಇರುವ 'ಯುವಜನ ಕಣಜ' ಪುಸ್ತಕ ಬಿಡುಗಡೆಗೊಳಿಸಲಾಯಿತು. ರಾಮಕೃಷ್ಣ ಮಠದ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್, ಪ್ರೊ.ತಿಮ್ಮೇಗೌಡ, ಪ್ರೋ.ಗೋಪಾಲಕೃಷ್ಣ ಜೋಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.